ಚಿತ್ರರಂಗದಲ್ಲಿ 50 ವರ್ಷ: ಹಿರಿಯ ನಟ ಅನಂತ್ ನಾಗ್ ಗೆ ಉಪೇಂದ್ರ, ಶಿವಣ್ಣ ಹಾರೈಕೆ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅನಂತ್ ನಾಗ್ ಗೆ ರಿಯಲ್ ಸ್ಟಾರ್ ಉಪೇಂದ್ರ, ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ.
ಕನ್ನಡ, ಹಿಂದಿ, ಮಲಯಾಳಂ, ಮರಾಠಿ ಸೇರಿದಂತೆ 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅನಂತ್ ನಾಗ್ ಮೊದಲು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು 1973 ರಲ್ಲಿ ಸಂಕಲ್ಪ ಸಿನಿಮಾ ಮೂಲಕ. ಈ ಸಿನಿಮಾಗೆ ರಾಜ್ಯ ಪ್ರಶಸ್ತಿ ಕೂಡಾ ಬಂದಿತ್ತು. ಸಿನಿಮಾಗಳಲ್ಲದೇ ಕಿರುತೆರೆಯಲ್ಲೂ ನಟಿಸಿದ್ದಾರೆ. ಒಂದು ಕಾಲದಲ್ಲಿ ಹಾಸ್ಯ, ರೊಮ್ಯಾಂಟಿಕ್ ಹೀರೋ ಆಗಿ ಹೆಂಗಳೆಯರ ಮನಗೆದ್ದಿದ್ದ ಅನಂತ್ ಇಂದು ಪೋಷಕ ಪಾತ್ರಗಳ ಮೂಲಕ ಸಹಜಾಭಿನಯದಿಂದ ಜನರ ಮನದಲ್ಲಿ ಅಚ್ಚಳಿಯದೇ ನಿಂತಿದ್ದಾರೆ. ಬದುಕಿನ 74 ವಸಂತಗಳನ್ನು ಕಳೆದಿರುವ ಅನಂತ್ ನಾಗ್ ಗೆ ಪದ್ಮ ಪ್ರಶಸ್ತಿ ನೀಡಬೇಕೆಂಬುದು ಕನ್ನಡಿಗರ ಬಹಳ ದಿನಗಳ ಬೇಡಿಕೆ. ಅವರ ಚಿತ್ರರಂಗದ 50 ವರ್ಷಗಳ ಪಯಣಕ್ಕೆ ನಮ್ಮದೂ ಒಂದು ಶುಭ ಹಾರೈಕೆಯಿರಲಿ.