ಬೆಂಗಳೂರು: ಐವಿಎಫ್ ಮೂಲಕ ನಟಿ ಭಾವನಾ ರಾಮಣ್ಣ ಕಳೆದ ತಿಂಗಳು ಮಗು ಪಡೆದಿರುವುದು ಗೊತ್ತಿರುವ ವಿಚಾರ. ಇದೀಗ ಮೊದಲ ಬಾರಿ ತಮ್ಮ ಪುಟ್ಟ ಕಂದಮ್ಮನ ಕುರಿತು ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಐವಿಎಫ್ ತಂತ್ರಜ್ಞಾನದ ಮೂಲಕ ಅವಳಿ ಮಕ್ಕಳಿಗೆ ತಾಯಿಯಾಗುತ್ತಿರುವ ಬಗ್ಗೆ ಭಾವನಾ ಮಾಹಿತಿ ಹಂಚಿಕೊಂಡಿದ್ದರು. ಆದರೆ ಹೆರಿಗೆ ವೇಳೆ ಒಂದು ಮಗು ಮೃತಪಟ್ಟಿದೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಭಾವನಾ ಈತನಕ ಸ್ಪಷ್ಟನೆ ನೀಡಿಲ್ಲ. ಅವರು ಮೊದಲ ಬಾರಿಗೆ ಮಗುವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ದೊಡ್ಡ ಮನೆ, ಪುಟ್ಟ ಕುಟುಂಬ… ಈಗ ನಮ್ಮ ಗೂಡಿಗೆ ಬಂದ ಹೊಸ ಪುಟ್ಟ ಹಕ್ಕಿಯ ಚುಯ್ ಚುಯ್ ನಾದ. ಹಕ್ಕಿಗಳ ಹಾಡಿಗೆ ಹೊಸ ಸರಿಗಮ ಸೇರಿಸಿದ ಈ ಪುಟ್ಟ ಜೀವ, ನಮ್ಮ ಬದುಕಿಗೆ ಹೊಸ ಪ್ರೀತಿಯ ಅಲೆ ತಂದುಕೊಟ್ಟಿದೆ. ಈ ವಿನೂತನ ವಿಸ್ಮಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನನ್ನ ಮಕ್ಕಳಿಗೆ ತಂದೆ ಇಲ್ಲದೇ ಇರಬಹುದು. ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಅಪರಿಮಿತ ಪ್ರೀತಿ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ ಎಂದು ಖುಷಿಯಿಂದ ಈ ಹಿಂದೆ ಅವರು ಹೇಳಿಕೊಂಡಿದ್ದರು.