ವಯನಾಡು: ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿತ ದುರಂತದಲ್ಲಿ ಸಂಕಷ್ಟಕ್ಕೀಡಾದವರಿಗೆ ಪರಿಹಾರ ನೀಡಲು ಸಹಾಯವಾಗುವಂತೆ ಅನೇಕ ಸೆಲೆಬ್ರಿಟಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಲಕ್ಷ, ಕೋಟಿಗಟ್ಟಲೆ ಹಣವನ್ನು ದಾನ ಮಾಡಿದ್ದಾರೆ. ಆದರೆ ಮಲಯಾಳಂ ಬಿಗ್ ಬಾಸ್ ಸ್ಪರ್ಧಿ ಅಖಿಲ್ ಮಾರಾರ್ ಇದರ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದಕ್ಕೆ ಈಗ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಮಲಯಾಳಂ ಬಿಗ್ ಬಾಸ್ ವಿಜೇತರಾಗಿದ್ದ ಅಖಿಲ್ ಮಾರಾರ್ ವಯನಾಡು ಸಂತ್ರಸ್ತರ ನೆರವಿಗೆ ತಮ್ಮ ಕೈಲಾದ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ತಾನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡುವುದಿಲ್ಲ ಎಂದಿದ್ದಾರೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಿದರೆ ಅದು ಸಂತ್ರಸ್ತರಿಗೆ ತಲುಪುತ್ತದೆ ಎನ್ನುವ ನಂಬಿಕೆಯಿಲ್ಲ. ಹೀಗಾಗಿ ಪರಿಹಾರ ನಿಧಿಗೆ ಹಣ ಕೊಡಲ್ಲ. ಅದರ ಬದಲಾಗಿ ಸಂತ್ರಸ್ತರಿಗೆ ತಾವೇ ಮನೆ ಕಟ್ಟಿಸಿಕೊಡಲು ನೆರವಾಗುವುದಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಅವರ ಈ ಪೋಸ್ಟ್ ಗೆ ಹಲವು ಪರ-ವಿರೋಧ ಕಾಮೆಂಟ್ ಗಳು ಬಂದಿದ್ದವು.
ಇದರ ಬೆನ್ನಲ್ಲೇ ಪೊಲೀಸರು ಅಖಿಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಇವರಲ್ಲದೆ, ಬಿಜೆಪಿ ಕಾರ್ಯಕರ್ತರೊಬ್ಬರನ್ನೂ ಇದೇ ವಿಚಾರವಾಗಿ ಪೊಲೀಸರು ಬಂಧಿಸಿದ್ದಾರೆ. ತಮ್ಮ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೇ ಇನ್ನೊಂದು ಪೋಸ್ಟ್ ಮಾಡಿದ ಅಖಿಲ್, ಇನ್ನೊಂದು ಕೇಸ್, ಮಹಾರಾಜನಿಗೆ ದೀರ್ಘಾಯುಷ್ಯ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.