ಬೆಂಗಳೂರು: ಮೈಸೂರು ಅಂಬಾರಿ ಆನೆ ಅರ್ಜುನನ ಸಮಾಧಿ ನಿರ್ಮಾಣಕ್ಕೆ ನೆರವು ನೀಡುವ ವಿಚಾರದಲ್ಲಿ ನಟ ದರ್ಶನ್ ನುಡಿದಂತೆ ನಡೆದುಕೊಂಡಿದ್ದಾರೆ. ಅರ್ಜುನನ ಸಮಾಧಿ ನಿರ್ಮಾಣಕ್ಕೆ ಅಗತ್ಯ ವಸ್ತುಗಳನ್ನು ಒದಗಿಸಿದ್ದಾರೆ.
ಕಾಡಾನೆಗಳನ್ನು ಸೆರೆ ಹಿಡಿಯಲು ಅರ್ಜುನನ್ನು ಬಳಸಲಾಗಿತ್ತು. ಈ ವೇಳೆ ಕಾಡಾನೆಗಳ ದಾಳಿಯಲ್ಲಿ ಅರ್ಜುನ ಮೃತಪಟ್ಟಿದ್ದ. ಆತನ ಸಾವಿಗೆ ಪ್ರಾಣಿಪ್ರಿಯರು ಕಣ್ಣೀರು ಮಿಡಿದಿದ್ದರು. ಬಳಿಕ ಘಟನೆ ನಡೆದ ಸ್ಥಳದಲ್ಲೇ ಅರ್ಜುನನ್ನು ಮಣ್ಣು ಮಾಡಲಾಗಿತ್ತು. ಆದರೆ ಆತನಿಗೆ ಇದುವರೆಗೆ ಸಮಾಧಿ ಮಾಡಿರಲಿಲ್ಲ.
ಕೆಲವು ದಿನಗಳ ಹಿಂದೆ ನಟ ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಅರ್ಜುನನ ಸಮಾಧಿ ದುಸ್ಥಿತಿ ಬಗ್ಗೆ ಬರೆದುಕೊಂಡಿದ್ದರು. ಮಳೆಗಾಲ ಬಂದರೆ ಅರ್ಜುನನ ಸಮಾಧಿ ಸ್ಥಳ ಇನ್ನಷ್ಟು ಶೋಚನೀಯವಾಗಲಿದೆ. ಇದರ ಬಗ್ಗೆ ನಾವೆಲ್ಲರೂ ಕೈ ಜೋಡಿ ಆತನಿಗೆ ಒಂದು ಸಮಾಧಿ ನಿರ್ಮಿಸುವ ಪ್ರಯತ್ನ ಮಾಡೋಣ ಎಂದು ದರ್ಶನ್ ಕರೆ ಕೊಟ್ಟಿದ್ದರು.
ಇದೀಗ ಸ್ವತಃ ದರ್ಶನ್ ಸಮಾಧಿ ನಿರ್ಮಿಸಲು ಬೇಕಾದ ಅಗತ್ಯ ವಸ್ತುಗಳನ್ನು ಒದಗಿಸಿದ್ದಾರೆ. ದರ್ಶನ್ ಅಭಿಮಾನಿಗಳ ಬಳಗ ಸಾಮಗ್ರಿಗಳನ್ನು ಈಗಾಗಲೇ ಸಮಾಧಿ ಸ್ಥಳಕ್ಕೆ ತಂದು ಕೆಲಸ ಶುರು ಮಾಡಿದೆ. ಕಷ್ಟಪಟ್ಟು ಕಾಡಿನಲ್ಲಿ ಟ್ರ್ಯಾಕ್ಟರ್ ಸಹಾಯದಿಂದ ಮಾರ್ಬಲ್ ಗಳು, ಕಲ್ಲುಗಳ ಲೋಡ್ ನ್ನು ಎಳೆದು ತರುತ್ತಿರುವ ದೃಶ್ಯಗಳನ್ನು ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಈಗಾಗಲೇ ಸಮಾಧಿ ನಿರ್ಮಾಣ ಕೆಲಸವೂ ಶುರುವಾಗಿದೆ. ಆ ಮೂಲಕ ದರ್ಶನ್ ನುಡಿದಂತೆ ನಡೆದುಕೊಂಡಿದ್ದು, ಪ್ರಾಣಿ ಪ್ರೀತಿಯನ್ನು ಸಾಬೀತುಪಡಿಸಿದ್ದಾರೆ.