ಹೊಸ ಸಿನಿಮಾದಲ್ಲಿ ಚಂದನ್ ಶೆಟ್ಟಿ
ಕನ್ನಡ ಚಿತ್ರರಂಗ ಯಾವಾಗ ತಾನೆ ಹೊಸಬರನ್ನು ಕೈಬಿಟ್ಟಿದೆ, ಹಾಗಂತ ನಾನು ಹೊಸಬನಲ್ಲ ನಾಯಕನಾಗಿ ಹೊಸಬ ಎನ್ನುತ್ತಾ ತಾನು ನಾಯಕನಾಗಿ ಅಭಿನಯಿಸಲಿರುವ ಚೊಚ್ಚಲ ಚಿತ್ರವಾದ 'ಎಲ್ರ ಕಾಲೆಳೆಯುತ್ತೆ ಕಾಲ'ದ ಪೋಸ್ಟರ್ ಹಂಚಿಕೊಂಡಿದ್ದ ಚಂದನ್ ಶೆಟ್ಟಿ ಚಂದನವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುವತ್ತ ಕಾಲಿಟ್ಟಿದ್ದರು. ತಾನು ಅಭಿನಯಿಸಿರುವ ಈ ಮೊದಲನೇ ಚಿತ್ರ ಬಿಡುಗಡೆಯಾಗುವ ಮುನ್ನವೇ ಇದೀಗ ಚಂದನ್ ಶೆಟ್ಟಿ ತಮ್ಮ ಮತ್ತೊಂದು ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ.ಹೌದು, ಎಲ್ರ ಕಾಲೆಳಿಯುತ್ತೆ ಕಾಲ ಚಿತ್ರದ ನಂತರ ಹಲವಾರು ಹಾಡುಗಳು ಹಾಗೂ ಇತರೆ ಚಿತ್ರಗಳಿಗೆ ಸಂಗೀತ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ ಚಂದನ್ ಶೆಟ್ಟಿ ಇದೀಗ ಸೂತ್ರಧಾರಿ ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ವಿಷಯವನ್ನು ಚಂದನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟರ್ ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದಾರೆ.ಈ ಸೂತ್ರಧಾರಿ ಚಿತ್ರಕ್ಕೆ ಕಿರಣ್ ಕುಮಾರ್ ಆರ್ ನಿರ್ದೇಶನವಿದ್ದು, ಈಗಲ್ ಐ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನವರಸನ್ ಬಂಡವಾಳ ಹೂಡುತ್ತಿದ್ದಾರೆ ಹಾಗೂ ಸ್ವತಃ ಚಂದನ್ ಶೆಟ್ಟಿ ಅವರೇ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಈ ಪೋಸ್ಟರ್ ನಲ್ಲಿ ಚಂದನ್ ಶೆಟ್ಟಿ ಖಾಕಿ ಧರಿಸಿ ಕುಳಿತಿದ್ದು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಖಚಿತವಾಗಿದೆ.