ಕೊರೋನಾದಿಂದ ಗುಣಮುಖರಾದ ಈ ಸೆಲೆಬ್ರಿಟಿಗಳ ಕತೆ ನಿಮಗೆ ಸ್ಪೂರ್ತಿ ನೀಡಲಿ
ಶನಿವಾರ, 1 ಆಗಸ್ಟ್ 2020 (09:24 IST)
ಬೆಂಗಳೂರು: ಕೊರೋನಾ ಎಂದರೇ ಭಯಬೀಳುವ ಮಂದಿಗೆ ಕೊರೋನಾ ಪೀಡಿತರಾಗಿ ಈಗ ಗುಣಮುಖರಾದ ಸೆಲೆಬ್ರಿಟಿಗಳು ಸ್ಪೂರ್ತಿಯಾಗಲಿದ್ದಾರೆ. ಸುಮಲತಾ ಅಂಬರೀಶ್, ನವ್ಯಾ ಸ್ವಾಮಿ, ಧ್ರುವ ಸರ್ಜಾ ಕೊರೋನಾದಿಂದ ಗುಣಮುಖರಾದ ಬಳಿಕ ಹೇಳಿದ ಮಾತುಗಳು ನಿಮ್ಮ ಧೈರ್ಯ ಹೆಚ್ಚಿಸಬಹುದು.
ಸುಮಲತಾ ಅಂಬರೀಶ್: ಅಂಬರೀಶ್ ನನಗೆ ಯಾವತ್ತೂ ಹೇಳೋರು, ಏನೇ ಕಷ್ಟ ಬಂದರೂ ಅದನ್ನು ಧೈರ್ಯದಿಂದ ಎದುರಿಸಬೇಕೆಂದು. ನಾನು ಎದುರಿಸಿದ್ದ ಬೇರೆ ಕಷ್ಟಗಳ ಮುಂದೆ ಕೊರೋನಾ ನನಗೆ ಕಷ್ಟವೆನಿಸಿರಲಿಲ್ಲ. ಕೊರೋನಾಗೆ ಯಾರೂ ಭಯಪಡಬೇಕಿಲ್ಲ. ಇದು ಗುಣಪಡಿಸಲಾಗದ ಖಾಯಿಲೆ ಏನೂ ಅಲ್ಲ. ಧೈರ್ಯದಿಂದ ಎದುರಿಸಿದರೆ ನಾವು ಗೆಲ್ಲಬಹುದು. ನನಗೆ ಆರಂಭದಲ್ಲಿ ಆಹಾರ ರುಚಿಸುತ್ತಿರಲಿಲ್ಲ. ಆದರೂ ನನ್ನ ಆರೋಗ್ಯಕ್ಕಾಗಿ ಸೇವಿಸಬೇಕಿತ್ತು. ವೈದ್ಯರ ಸಲಹೆಯನ್ನು ತಪ್ಪದೇ ಪಾಲಿಸಿದೆ. ಈಗ ನಾನು ಸಂಪೂರ್ಣ ಗುಣಮುಖನಾಗಿದ್ದೇನೆ.
ಧ್ರುವ ಸರ್ಜಾ: ಕೊರೋನಾಗೇ ಸವಾಲು ಹಾಕೋಣವೆನಿಸಿ ಆಸ್ಪತ್ರೆಯಿಂದ ಹೊರಬಂದು ಈಗ ನಮ್ಮ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ. ಕೊರೋನಾ ಬಂತೆಂದು ಭಯಪಡದೇ ತಕ್ಷಣವೇ ವೈದ್ಯರ ಸಲಹೆಯನ್ನು ಪಾಲಿಸಿ. ವಿಶ್ರಾಂತಿ ತೆಗೆದುಕೊಳ್ಳಿ. ಒಳ್ಳೆ ಆಹಾರ ಸೇವಿಸಿ. ಖಂಡಿತಾ ನಾವು ಗೆಲ್ಲಬಹುದು.
ನವ್ಯಾ ಸ್ವಾಮಿ (ಕಿರುತೆರೆ ನಟಿ): ನಾನು ಎಲ್ಲರ ಆಶೀರ್ವಾದಿಂದ ಗುಣಮುಖನಾಗಿದ್ದೇನೆ. ನನಗೆ ಈಗ ಮೊದಲಿಗಿಂತಲೂ ಬೆಟರ್ ಫೀಲ್ ಆಗುತ್ತಿದೆ. ಕೊರೋನಾ ಗುಣವಾಗಬಲ್ಲ ರೋಗ. ಆದರೆ ಇದಕ್ಕೆ ಎಚ್ಚರಿಕೆ ವಹಿಸಬೇಕಷ್ಟೇ. ಎಲ್ಲರೂ ಹೇಳುವ ಹಾಗೆ ರೋಗ ಬರುವುದಕ್ಕಿಂತ ಮೊದಲೇ ಅದಕ್ಕೆ ಮುನ್ನೆಚ್ಚರಿಕೆ ವಹಿಸಿಕೊಂಡರೆ ಉತ್ತಮ. ಆದರೆ ಹೆದರಬೇಕಾಗಿಲ್ಲ.