ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ದರ್ಶನ್ ಆಂಡ್ ಗ್ಯಾಂಗ್ ಗೆ ಇಂದು ಮಹತ್ವದ ದಿನವಾಗಿದೆ. ಇಂದು ಎಲ್ಲಾ ಆರೋಪಿಗಳು ಮತ್ತೆ ಕೋರ್ಟ್ ಗೆ ಹಾಜರಾಗಲಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎಲ್ಲಾ 17 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದುವರೆಗೆ ಎಲ್ಲರೂ ಪರಪ್ಪನ ಅಗ್ರಹಾರದಲ್ಲಿ ಒಟ್ಟಿಗೇ ಕಳೆದಿದ್ದರು. ಆದರೆ ಕಳೆದ ಒಂದು ವಾರದಿಂದ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆದ ತಪ್ಪಿಗೆ ಒಬ್ಬೊಬ್ಬರು ಒಂದೊಂದು ಜೈಲಿನಲ್ಲಿ ಕಳೆಯುವಂತಾಗಿದೆ.
ಕಳೆದ ಬಾರಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾಗ ಇನ್ನೂ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿರಲಿಲ್ಲ. ಹೀಗಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿರಲಿಲ್ಲ. ಆದರೆ ಈಗ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಇಂದು ಎಲ್ಲಾ ಆರೋಪಿಗಳೂ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ. ಇಂದು ಎಲ್ಲಾ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ತಾವಿರುವ ಜೈಲಿನಿಂದಲೇ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ.
ದರ್ಶನ್ ಬಳ್ಳಾರಿ ಜೈಲಿನಲ್ಲಿ ಏಕಾಂಗಿಯಾಗಿದ್ದು ಮೊನ್ನೆಯಷ್ಟೇ ಅವರ ಪತ್ನಿ ವಿಜಯಲಕ್ಷ್ಮಿ ಜಾಮೀನು ಅರ್ಜಿಗೆ ಸಹಿ ಹಾಕಿಸಿಕೊಂಡು ಹೋಗಿದ್ದರು. ಹೀಗಾಗಿ ಇಂದು ದರ್ಶನ್ ಜಾಮೀನು ಅರ್ಜಿ ಸಲ್ಲಿಸುವುದು ಫಿಕ್ಸ್ ಆಗಿದೆ. ಇನ್ನು, ಎ1 ಆರೋಪಿ ಪವಿತ್ರಾ ಗೌಡ ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿಸಿದರೂ ತಿರಸ್ಕೃತವಾಗಿದೆ. ಇದೀಗ ಹೊಸದಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಲಿದ್ದಾರೆ. ಉಳಿದ ಆರೋಪಿಗಳೂ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ. ಈ ಪೈಕಿ ಕೆಲವು ಆರೋಪಿಗಳಿಗೆ ಸ್ವಂತ ವಕೀಲರನ್ನಿಟ್ಟುಕೊಂಡು ಜಾಮೀನಿಗೆ ಅರ್ಜಿ ಸಲ್ಲಿಸುವಷ್ಟು ಆರ್ಥಿಕವಾಗಿ ಅನುಕೂಲವಿಲ್ಲ. ಹೀಗಾಗಿ ಇಂದು ದರ್ಶನ್ ಆಂಡ್ ಗ್ಯಾಂಗ್ ಗೆ ಮಹತ್ವದ ದಿನವಾಗಿರಲಿದೆ.