ಬಳ್ಳಾರಿ: ಚಿತ್ರದುರ್ಗಾದ ರೇಣಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಆರು ವಾರಗಳ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಅದರ ಬೆನ್ನಲ್ಲೇ ದರ್ಶನ್ ಇರುವ ಬಳ್ಳಾರಿ ಜೈಲಿನಲ್ಲಿ ಚಟುವಟಿಕೆ ಗರಿಗೆದರಿದೆ. ಜಾಮೀನು ಪ್ರತಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸಂಜೆ 6.30ರ ಒಳಗಾಗಿ ತಲುಪದರೆ ದರ್ಶನ್ ಅವರನ್ನು ಇಂದೇ ಬಿಡುಗಡೆ ಮಾಡಲಾಗುವುದು ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದ್ದಾರೆ.
ಇಂದು ಸಂಜೆ 6.30ಕ್ಕೆ ಜೈಲನ್ನು ಲಾಕಪ್ ಮಾಡುತ್ತೇವೆ. ಅಷ್ಟರ ಒಳಗಾಗಿ ನಮಗೆ ಜಾಮೀನು ಪ್ರತಿ ತಲುಪಬೇಕು. ಒಂದು ವೇಳೆ ಸಂಜೆ 6.30ರ ನಂತರ ಸಿಕ್ಕರೆ ನಾಳೆಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಒಂದೋ, ನ್ಯಾಯಾಲಯದ ಅಧಿಕೃತ ಇ–ಮೇಲ್ ಐಡಿಯಿಂದ ನಮಗೆ ಜಾಮೀನು ಪ್ರತಿ ಸಿಗಬೇಕು. ಇಲ್ಲವೇ ಕುಟುಂಬಸ್ಥರಾದರೂ ಖುದ್ದಾಗಿ ತಂದು ಹಾಜರುಪಡಿಸಬೇಕು. ಜಾಮೀನು ಪ್ರತಿ ಸಿಕ್ಕ ಕೂಡಲೇ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಗುರುವಾರದಿಂದ ನಾಲ್ಕು ದಿನ ಸರ್ಕಾರಿ ರಜೆ ಇರುವುದರಿಂದ ದರ್ಶನ್ ಬಿಡುಗಡೆ ತಡವಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿಚಾರಣಾಧೀನ ಕೈದಿಗಳನ್ನು ಕೋರ್ಟ್ ಹೇಳಿದ ಕೂಡಲೇ ಬಿಡುಗಡೆ ಮಾಡಬೇಕಾಗುತ್ತದೆ. ಸರ್ಕಾರಿ ರಜೆಗಳು ಇವರಿಗೆ ಅನ್ವಯವಾಗುವುದಿಲ್ಲ ಎಂದೂ ಅವರೂ ಸ್ಪಷ್ಪಪಡಿಸಿದರು.
ದರ್ಶನ್‌ಗೆ ಜಾಮೀನು ಮಂಜೂರಾಗುತ್ತಲೇ ಇತ್ತ ಬಳ್ಳಾರಿ ಜೈಲು ಬಳಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಸುದ್ದಿ ತಿಳಿದ ಅವರ ಅಭಿಮಾನಿಗಳು ಒಬ್ಬೊಬ್ಬರಾಗಿಯೇ ಜೈಲಿನ ಬಳಿಗೆ ಬರಲಾರಂಭಿಸಿದ್ದಾರೆ.