ಬೆಂಗಳೂರು: ಮಂಡ್ಯದ ಮಾಜಿ ಸಂಸದೆ, ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ ಹಾಗೂ ಬೆದರಿಕೆ ಹಾಕಿದ್ದ ಪ್ರಕರಣ ಮತ್ತಷ್ಟು ಕಾವೇರುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಕೆ.ಆರ್.ಪುರದ ನಿವಾಸಿ ಪ್ರಮೋದ್‌ಗೌಡ (20) ಎಂಬಾತನನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೂ ಭುವನ್‌ಗೌಡ, ರಾಜೇಶ್, ಟಿ.ಓಬಣ್ಣ, ಗಂಗಾಧರ ಹಾಗೂ ಕೊಪ್ಪಳದ ಮಂಜುನಾಥ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಸ್ನೇಹಿತನ ಮೊಬೈಲ್‌ನಿಂದ ಇನ್‌ಸ್ಟಾಗ್ರಾಂ ಖಾತೆ ತೆರೆದು ರಮ್ಯಾ ಅವರ ಇನ್‌ಸ್ಟಾಗ್ರಾಂ ಖಾತೆಗೆ ಅಶ್ಲೀಲ ಹಾಗೂ ಬೆದರಿಕೆ ಸಂದೇಶ ಕಳುಹಿಸಿದ್ದ. ಪ್ರಮೋದ್ ಗೌಡ– 87 ಎಂಬ ಖಾತೆಯಿಂದ ಸಂದೇಶ ಕಳುಹಿಸಿದ್ದ.
ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶ ಕಳುಹಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಮ್ಯಾ ಅವರು ಜುಲೈ 28ರಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದರು.
ಆ ದೂರು ಆಧರಿಸಿ ಸೈಬರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಒಟ್ಟು 43 ಖಾತೆಗಳಿಂದ ಬೆದರಿಕೆ ಸಂದೇಶಗಳು ಬಂದಿರುವುದಾಗಿ ಉಲ್ಲೇಖಿಸಿ ರಮ್ಯಾ ಅವರು ದೂರು ನೀಡಿದ್ದರು.