ಬೆಂಗಳೂರು:ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ರದ್ದಾಗಿ ಮತ್ತೇ ಜೈಲು ಸೇರಿರುವ ನಟ ದರ್ಶನ್ ದಿನಕಳೆಯಲು ಪರದಾಡುತ್ತಿದ್ದಾರೆ.
ಯಾವುದೇ ಸೌಲಭ್ಯವಿಲ್ಲದೆ, ಸಾಮಾನ್ಯ ಬಂಧಿಯಂತೆ ಜೈಲಿನಲ್ಲಿ ದಿನಕಳೆಯುತ್ತಿರುವ ದರ್ಶನ್ ಈಚೆಗೆ ಜಡ್ಜ್ ಮುಂದೆ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದರು. ನನಗೆ ಒಂದು ತೊಟ್ಟು ವಿಷ ಕೊಡಿ, ಇಲ್ಲಿರಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋರಿಸಿಕೊಂಡಿದ್ದರು.
ಇದನ್ನು ಆಲಿಸಿದ ಕೋರ್ಟ್ ದರ್ಶನ್‌ಗೆ ಹಾಸಿಗೆ, ದಿಂಬು ಹಾಗೂ ಜಮ್ಕನ್ ನೀಡಲು ಆದೇಶಿಸಿತ್ತು. ಆದರೆ ಇದೀಗ ದರ್ಶನ್ ಕೋರ್ಟ್‌ನಿಂದ ಆದೇಶವಿದ್ದರು ಜೈಲು ಅಧಿಕಾರಿಗಳು ಯಾವುದೇ ಸೌಕರ್ಯವನ್ನು ನೀಡುತ್ತಿಲ್ಲ ಎಂದು ದರ್ಶನ್ ಪರ ವಕೀಲರು 57ನೇ ಸಿಸಿಎಚ್ ಕೋರ್ಟ್‌ನಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ.
ಜೈಲಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಹಾಗೂ ಕೋರ್ಟ್ ಆದೇಶ ಮಾಡಿದ್ರೂ ಯಾವುದೇ ಸೌಕರ್ಯ ನೀಡಿಲ್ಲ. ಕೋರ್ಟ್ ಆದೇಶದ ಪ್ರತಿಯನ್ನು ಇ-ಮೇಲ್ ಮಾಡಲಾಗಿದೆ. ಆದರೂ ದರ್ಶನ್‌ಗೆ ಅದೇ ನರಕ ಮುಂದುವರಿದಿದೆ. ಎರಡು-ಮೂರು ಬಾರಿ ಜೈಲಿಗೆ ಹೋಗಿ ವಿಚಾರಿಸಿದ್ದೀವಿ. ಆದರೂ ಕೂಡ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ದರ್ಶನ್ ಜೈಲು ಸೇರಿ ತಿಂಗಳಾದರೂ ಇನ್ನೂ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. 14 ದಿನಗಳ ಕಾಲ ಮಾತ್ರ ಕ್ವಾರಂಟೈನ್ ಸೆಲ್ ಅಲ್ಲಿ ಇರಿಸಬೇಕು. ಇನ್ನು ಬಿಸಿಲಿನ ವಿಚಾರಕ್ಕೆ ಸೂರ್ಯನನ್ನು ತರೋದಕ್ಕೆ ಆಗುತ್ತಾ ಅಂತ ಉತ್ತರಿಸುತ್ತಾರೆ. ಅದಲ್ಲದೇ ಹಾಸಿಗೆ, ದಿಂಬು ಏನನ್ನು ಕೊಡ್ತಿಲ್ಲ. ತುಂಬಾ ಕನಿಷ್ಠವಾಗಿ ನಡೆಸಿಕೊಳ್ತಿದ್ದಾರೆ ಎಂದು ಮನವಿ ಮಾಡಿಕೊಂಡಿದ್ದಾರೆ. ಅರ್ಜಿ ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಸೆ.27ಕ್ಕೆ ಮುಂದೂಡಿದೆ.