ಮೈಸೂರಿನಲ್ಲಿ ಸಂಕ್ರಾಂತಿ ಆಚರಿಸಲು ದರ್ಶನ್ ಪ್ಲಾನ್‌, ಕೋರ್ಟ್ ಬಳಿ ಡಿಬಾಸ್ ಬೇಡಿಕೆ ಹೀಗಿತ್ತು

Sampriya

ಶುಕ್ರವಾರ, 10 ಜನವರಿ 2025 (15:21 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳು ಇಂದು ಕೋರ್ಟ್ ಮುಂದೆ ಹಾಜರಾದರು. ವಿಚಾರಣೆ ವೇಳೆ ಪವಿತ್ರಾ ಗೌಡ ಹೊರ ರಾಜ್ಯಕ್ಕೆ ತೆರಳಲು ಅನುಮತಿ ಕೋರಿದ್ದಾರೆ.

57ನೇ ಸಿಸಿಹೆಚ್‌ ನ್ಯಾಯಾಧೀಶರ ಮುಂದೆ ದರ್ಶನ್‌ ಪರ ವಕೀಲರು ಮೈಸೂರಿಗೆ ತೆರಳಲು ಅನುಮತಿ ನೀಡಬೇಕೆಂದು ಕೇಳಿದ್ದರು. ಪವಿತ್ರಾ ಗೌಡ ಪರ ವಕೀಲರು ಹೊರ ರಾಜ್ಯಕ್ಕೆ ತೆರಳಲು ಅನುಮತಿ ನೀಡಬೇಕೆಂದು ಮನವಿ ಮಾಡಿದರು.

ಈ ಎರಡು ಅರ್ಜಿಗಳನ್ನು ಕೋರ್ಟ್‌ ಮಾನ್ಯ ಮಾಡಿದೆ. ದರ್ಶನ್‌ಗೆ ಜ.12ರಿಂದ 17ರವರೆಗೆ ಮೈಸೂರಿನಲ್ಲಿ ತಂಗಲು ಅನುಮತಿ ನೀಡಿದೆ. ಹೀಗಾಗಿ ಈ ಬಾರಿ ಸಂಕ್ರಾಂತಿಯನ್ನು ಮೈಸೂರಿನಲ್ಲಿ ದರ್ಶನ್‌ ಆಚರಿಸಲಿದ್ದಾರೆ.

ಇನ್ನೂ ಪವಿತ್ರಾ ಗೌಡ ಅವರು ದೇವಸ್ಥಾನ ಹಾಗೂ ವ್ಯವಹಾರ ಸಂಬಂಧ ಒಂದು ತಿಂಗಳ ಕಾಲ ಹೊರ ರಾಜ್ಯಕ್ಕೆ ಹೋಗಲು ಅನುಮತಿ ಕೇಳಿದ್ದರು. ಆರ್ ಆರ್ ನಗರದಲ್ಲಿ ಇರುವ ರೆಡ್ ಕಾರ್ಪೆಟ್ ಶೋ ರೂಂಗೆ ಸಂಬಂಧಿಸಿದಂತೆ ವಸ್ತುಗಳನ್ನು ತರಲು ಅವಕಾಶ ನೀಡುವಂತೆ ಪವಿತ್ರಾ ಗೌಡ ಅರ್ಜಿಯಲ್ಲಿ ಮನವಿ ಮಾಡಿದ್ದರು.

ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಕರ್ನಾಟಕ ಹೈಕೋರ್ಟ್‌ ಡಿ. 13 ರಂದು ಜಾಮೀನು ಮಂಜೂರು ಮಾಡಿತ್ತು. ಆದೇಶದಲ್ಲಿ ಏಳು ಆರೋಪಿಗಳಿಗೆ, ಕೋರ್ಟ್ ಅನುಮತಿ ಇಲ್ಲದೇ ಬೆಂಗಳೂರು ಬಿಟ್ಟು ಹೋಗುವಂತಿಲ್ಲ. ಪ್ರತಿ ತಿಂಗಳು ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ