ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆದ ಹಿನ್ನಲೆಯಲ್ಲಿ ನಟ ದರ್ಶನ್ ರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಕೋರ್ಟ್ ಒಪ್ಪಿಗೆ ನೀಡಿತ್ತು. ಜೈಲಿನಲ್ಲಿ ಮಾಡಿದ ತಪ್ಪಿಗೆ ಬೇರೆ ಜೈಲಿಗೆ ಶಿಫ್ಟ್ ಆಗುವುದರ ಜೊತೆಗೆ ದರ್ಶನ್ ಗೆ ಇಂದು ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಆಂಡ್ ಗ್ಯಾಂಗ್ ಕಳೆದ ಎರಡು ತಿಂಗಳಿನಿಂದ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿತ್ತು. ಆದರೆ ಇತ್ತೀಚೆಗೆ ಇಲ್ಲಿ ದರ್ಶನ್ ಗೆ ವಿಐಪಿ ಟ್ರೀಟ್ ಮೆಂಟ್ ಕೊಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಅವರ ಫೋಟೋ, ವಿಡಿಯೋಗಳು ವೈರಲ್ ಆಗಿತ್ತು.
ಈ ಹಿನ್ನಲೆಯಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ದರ್ಶನ್ ರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಸೂಚಿಸಿದ್ದರು. ಆದರೆ ದರ್ಶನ್ ಶಿಫ್ಟ್ ಮಾಡಲು ಕೋರ್ಟ್ ಒಪ್ಪಿಗೆ ಬೇಕಿತ್ತು. ಅದರಂತೆ ಪೊಲೀಸರು ಈಗ ಕೋರ್ಟ್ ಒಪ್ಪಿಗೆ ಪಡೆದು ದರ್ಶನ್ ರನ್ನು ಮತ್ತೊಂದು ಜೈಲಿಗೆ ವರ್ಗಾಯಿಸುತ್ತಿದ್ದಾರೆ.
ಈ ನಡುವೆ ಇಂದು ದರ್ಶನ್ ಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಇಂದು ದರ್ಶನ್ ಆಂಡ್ ಗ್ಯಾಂಗ್ ನ ನ್ಯಾಯಾಂಗ ಬಂಧನ ಅವಧಿ ಮುಕ್ತಾಯಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಆಂಡ್ ಗ್ಯಾಂಗ್ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ. ಇಂದೂ ಕೂಡಾ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗುವ ಸಾಧ್ಯತೆಯೇ ಹೆಚ್ಚು. ಅದಾದ ಬಳಿಕ ಅವರು ಬೇರೆ ಜೈಲಿಗೆ ವರ್ಗಾವಣೆಯಾಗಲಿದೆ. ಯಾಕೆಂದರೆ ದರ್ಶನ್ ಪರ ವಕೀಲರು ಇನ್ನೂ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಆದರೆ ಪವಿತ್ರಾ ಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇಂದು ಮತ್ತೆ ವಿಚಾರಣೆಗೆ ಬರಲಿದೆ.