ಆನೆ ನಡೆದಿದ್ದೆ ದಾರಿ ಅಲ್ವೇನ್ರಿ ಯಾರು ಕೊಡಬೇಡಿ `ಟಕ್ಕರ್’ ಎನ್ನಲು ಬರುತ್ತಿದ್ದಾರೆ ದರ್ಶನ್!

ಶುಕ್ರವಾರ, 30 ಆಗಸ್ಟ್ 2019 (16:11 IST)
ದರ್ಶನ್ ಅವರ ಅಕ್ಕನ ಮಗ ಮನೋಜ್ ಕುಮಾರ್ ಹೀರೋ, ಪುಟ್ಟಗೌರಿ ಮದುವೆ ಅನ್ನೋ ಧಾರಾವಾಹಿ ಮೂಲಕವೇ ಫೇಮಸ್ಸಾದ ರಂಜನಿ ರಾಘವನ್ ಹೀರೋಯಿನ್ – ಈ ಇಬ್ಬರ ಕಾಂಬಿನೇಷನ್ನಿನಲ್ಲಿ ಬರುತ್ತಿರುವ ಟಕ್ಕರ್ ಸಿನಿಮಾ ನಿರಂತರವಾಗಿ ಸುದ್ದಿಯಲ್ಲಿದೆ. 
ಸದ್ಯ `ಆನೆ ನಡೆದಿದ್ದೆ ದಾರಿ ಅಲ್ವೇನ್ರಿ ಯಾರು ಕೊಡಬೇಡಿ ಟಕ್ಕರ್’ ಎನ್ನುವ ಶೀರ್ಷಿಕೆ ಗೀತೆ ಸೇರಿದಂತೆ ಒಟ್ಟು ಮೂರು ಹಾಡುಗಳಿರುವ ಆಡಿಯೋವನ್ನು ರಿಲೀಸ್ ಮಾಡಲು ಸೆಪ್ಟೆಂಬರ್ 7ಕ್ಕೆ ವೇದಿಕೆ ಸಜ್ಜಾಗಿದೆ. ಈ ಕಾರ್ಯಕ್ರಮಕ್ಕೆ ಖುದ್ದು ಮನೋಜ್ ಅವರ ಸೋದರ ಮಾವ ದರ್ಶನ್ ಅವರೇ ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವುದು ಇಡೀ ಚಿತ್ರರಂಗ ಮಾತ್ರವಲ್ಲದೆ ದರ್ಶನ್ ಅವರ ಅಭಿಮಾನಿಗಳ ಎದೆಯಲ್ಲಿ ಪುಳಕ ಶುರುವಾಗಿದೆ.                      
 
ಕಳೆದ ಎರಡು ವರ್ಷಗಳ  ಹಿಂದೆ ಹುಲಿರಾಯ ಎನ್ನುವ ಸಿನಿಮಾ ನಿರ್ಮಿಸಿದ್ದವರು ಕೆ.ಎನ್. ನಾಗೇಶ್ ಕೋಗಿಲು.  ತಮ್ಮ ಎಸ್.ಎಲ್.ಎನ್. ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ನಾಗೇಶ್ ಅವರು ನಿರ್ಮಿಸಿರುವ  ಎರಡನೇ ಚಿತ್ರ ಟಕ್ಕರ್. ಈ ಸಿನಿಮಾದ ಮೂಲಕ ಮನೋಜ್ ಕುಮಾರ್ ತೂಗುದೀಪ ಅವರು ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. 
ಈ ಹಿಂದೆ ದರ್ಶನ್ ಅವರ ಅಂಬರೀಶ, ಚಕ್ರವರ್ತಿ ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದವರು ಮನೋಜ್ ಕುಮಾರ್. ಟಕ್ಕರ್ ಮೂಲಕ ಹೀರೋ ಆಗಿ ಬದಲಾಗುತ್ತಿರುವ ಮನೋಜ್ ಅವರ ಬಗ್ಗೆ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆಗಳು ಮನೆಮಾಡಿವೆ. ಟಕ್ಕರ್ ಚಿತ್ರದ ಆಡಿಯೋವನ್ನು ಮನೋಜ್ ಅವರ ಸೋದರ ಮಾವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಪ್ಟೆಂಬರ್ 7ರಂದು ನಡೆಯುವ ಅದ್ದೂರಿ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. `ಟಕ್ಕರ್’ನಲ್ಲಿ ಮೂರು ಹಾಡುಗಳಿವೆ. ಡಾ. ವಿ ನಾಗೇಂದ್ರ ಪ್ರಸಾದ್ ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಡ್ಯುಯೆಟ್ ಹಾಡನ್ನು ವಿಜಯಪ್ರಕಾಶ್ ಮತ್ತು ಅನುರಾಧಾ ಭಟ್ ಹಾಡಿದರೆ, ಹೀರೋ ಇಂಟ್ರಡಕ್ಷನ್ ಸಾಂಗ್ ಅನ್ನು ಶಶಾಂಕ್ ಶೇಷಗಿರಿ ಹಾಡಿದ್ದಾರೆ. 
 
ಸ್ಫೂರ್ತಿದಾಯಕ ಗೀತೆಯನ್ನು ಯುವ ಹಾಡುಗಾರ ಸಂಜಿತ್ ಹೆಗ್ಡೆ ಹಾಡಿದ್ದಾರೆ. ವಿಜಯ ಪ್ರಕಾಶ್ ಹಾಡಿರುವ ಹಾಡನ್ನು ಮಲೇಶಿಯಾದಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷವೆಂದರೆ ಈ ಚಿತ್ರದ ಆರಂಭದಲ್ಲಿ ಬರುವ ನಾಯಕನ ಇಂಟ್ರಡಕ್ಷನ್ ಹಾಡಿನಲ್ಲೇ ಫೈಟ್ ಅನ್ನೂ ಅಳವಡಿಸಲಾಗಿದೆ. `ಆನೆ ನಡೆದಿದ್ದೆ ದಾರಿ ಅಲ್ವೇನ್ರಿ ಯಾರು ಕೊಡಬೇಡಿ ಟಕ್ಕರ್’ ಎನ್ನುವ ಸಾಲಿನಿಂದ ಆರಂಭವಾಗುವ ಹಾಡಿನಲ್ಲಿ ಮೋಹನ್ ಅವರ ಕೊರಿಯೋಗ್ರಫಿ ಮತ್ತು ಡಿಫರೆಂಟ್ ಡ್ಯಾನಿ ಅವರ ಸಾಹಸ ಸಮ್ಮಿಲನಗೊಂಡಿದೆ. ಥ್ರಿಲ್ಲರ್ ಮತ್ತು ಸಾಹಸಪ್ರಧಾನ ಅಂಶಗಳನ್ನು ಒಳಗೊಂಡಿದೆ. ರಘುಶಾಸ್ತ್ರಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ, ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ವಿಲಿಯಮ್ಸ್ ಡೇವಿಡ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ನೃತ್ಯ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಗುರುರಾಜ್ ದೇಸಾಯಿ ಸಂಭಾಷಣೆ ಈ ಚಿತ್ರಕ್ಕಿದೆ. ಮನೋಜ್ ಕುಮಾರ್ ಮತ್ತು ರಂಜನಿರಾಘವನ್, ಕೆ.ಎಸ್. ಶ್ರೀಧರ್, ಶಂಕರ್ ಅಶ್ವಥ್, ಸುಮಿತ್ರಾ, ಭಜರಂಗಿ ಖ್ಯಾತಿಯ ಸೌರವ್ ಲೋಕಿ, ಸಾಧು ಕೋಕಿಲಾ, ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ಕುರಿ ಸುನಿಲ್, ಜೈಜಗದೀಶ್ ಮುಂತಾದವರು ಟಕ್ಕರ್ ಸಿನಿಮಾದಲ್ಲಿ ಪಾತ್ರ ನಿರ್ವಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ