ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯದ ಆರೋಪದ ಬೆನ್ನಲ್ಲೇ ನಟ ದರ್ಶನ್ ಮತ್ತು ಪಟಾಲಂನನ್ನು ಮತ್ತೊಂದು ಜೈಲಿಗೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ. ದರ್ಶನ್ ಮುಂದೆ ಶಿಫ್ಟ್ ಆಗಲಿರುವ ಜೈಲು ಯಾವುದು ಅದರ ವಿಶೇಷತೆ ಏನು ಇಲ್ಲಿದೆ ವಿವರ.
ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿರುವ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಟ್ವೀಟ್ ಮುಖಾಂತರ ದರ್ಶನ್ ರನ್ನು ಬೇರೆ ಜೈಲಿಗೆ ವರ್ಗಾಯಿಸಲು ಆದೇಶಿಸಿದ್ದೇನೆ ಎಂದಿದ್ದಾರೆ.
ಇದರ ಬೆನ್ನಲ್ಲೇ ದರ್ಶನ್ ಮತ್ತು ಕೆಲವು ಆರೋಪಿಗಳನ್ನು ಬೇರೆ ಜೈಲಿಗೆ ವರ್ಗಾಯಿಸಲು ತಯಾರಿ ನಡೆದಿದೆ. ಮೂಲಗಳ ಪ್ರಕಾರ ದರ್ಶನ್ ಮತ್ತು ಕೆಲವು ಆರೋಪಿಗಳನ್ನು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಈ ಜೈಲು ಇರುವುದು ಬೆಳಗಾವಿಯಲ್ಲಿ. ಈ ಜೈಲಿಗೆ ಸಾಕಷ್ಟು ಇತಿಹಾಸವಿದೆ.
ಶತಮಾನಗಳಷ್ಟು ಹಳೆಯದಾದ ಈ ಜೈಲಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಅನೇಕ ಮಹನೀಯರು ಬಂಧನ ಅನುಭವಿಸಿದ್ದಾರೆ. ಈ ಜೈಲು ಅಂಧೇರಿ ಜೈಲು ಎಂದೇ ಖ್ಯಾತವಾಗಿದೆ. ಇದು ಅತ್ಯಂತ ಹಳೆಯ ಮತ್ತು ವಿಶಾಲವಾದ ಜೈಲುಗಳಲ್ಲಿ ಒಂದಾಗಿದೆ. 1923 ರಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಜೈಲು ಇದಾಗಿದೆ.
ಹಿಂಡಲಗಾ ಜೈಲಿನಲ್ಲಿ ಈಗ ಕುಖ್ಯಾತ ಕಾಮಿ, ಹಂತಕ ಉಮೇಶ್ ರೆಡ್ಡಿ, ವೀರಪ್ಪನ್ ಗ್ಯಾಂಗ್ ನ ಸಹಚರರು, ವಿಚಾರಣಾಧೀನ ಭಯೋತ್ಪಾದಕರು ಸೇರಿದಂತೆ ಕುಖ್ಯಾತರ ಪಟ್ಟಿಯೇ ಈ ಜೈಲಿನಲ್ಲಿದ್ದಾರೆ. ಮರಣದಂಡನೆಗೆ ಒಳಗಾಗುವ ಅಪರಾಧಿಗಳನ್ನು ಇಲ್ಲಿ ಕೂಡಿಹಾಕಲಾಗುತ್ತದೆ. ಈ ಜೈಲಿನಲ್ಲೂ ಆರೋಪಿಗಳಿಗೆ ಬೇಡಿದ್ದು ನೀಡಿದ್ದ ಹಲವು ಪ್ರಕರಣಗಳು ವರದಿಯಾಗಿತ್ತು. ಆದರೆ ಈಗ ದರ್ಶನ್ ಆಂಡ್ ಗ್ಯಾಂಗ್ ಇಲ್ಲಿಗೆ ಶಿಫ್ಟ್ ಆಗುತ್ತಾರೆಯೇ ಎಂದು ಕಾದು ನೋಡಬೇಕಿದೆ.