ವಿಜಯಲಕ್ಷ್ಮಿ ದರ್ಶನ್, ದಿನಕರ್ ತೂಗುದೀಪ ಮತ್ತು ನಿರ್ದೇಶಕ ಪ್ರೇಮ್ ನಿನ್ನೆ ಡಿಕೆ ಶಿವಕುಮಾರ್ ರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ದರ್ಶನ್ ಪುತ್ರ ವಿನೀಶ್ ಶಾಲೆ ಅಡ್ಮಿಷನ್ ವಿಚಾರವಾಗಿ ಭೇಟಿಯಾಗಿದ್ದಾಗಿ ನಿರ್ದೇಶಕ ಪ್ರೇಮ್ ನೆಪ ಹೇಳಿದ್ದರು.
ಆದರೆ ಇಲ್ಲಿ ಕೇವಲ ಮಗನ ಅಡ್ಮಿಷನ್ ವಿಚಾರ ಮಾತ್ರವಲ್ಲ, ದರ್ಶನ್ ರನ್ನು ಕಾಪಾಡುವ ಕುರಿತೂ ಮಾತುಕತೆ ನಡೆಸಲಾಗಿದೆ ಎನ್ನಲಾಗುತ್ತಿದೆ. ದರ್ಶನ್ ವಿಚಾರಣೆ ವೇಳೆ ನಾನು ಹೊಡೆದಿಲ್ಲ ಎಂದು ಹೇಳಿರುವುದಾಗಿ ವಿಜಯಲಕ್ಷ್ಮಿ ಡಿಸಿಎಂಗೆ ಮನವರಿಕೆ ಮಾಡಿದ್ದಾರೆ. ಹೀಗಾಗಿ ಕಾನೂನು ರೀತಿಯಲ್ಲಿ ದರ್ಶನ್ ರನ್ನು ಸೇವ್ ಮಾಡಲು ಸಹಾಯ ಮಾಡಿ ಎಂದಿದ್ದಾರಂತೆ.
ಅದಲ್ಲದೆ, ರೇಣುಕಾಸ್ವಾಮಿ ಕುಟುಂಬಕ್ಕೂ ಸಹಾಯ ಮಾಡುವ ಬಗ್ಗೆ ಮಾತುಕತೆ ನಡೆಸಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಕೇವಲ ಮಗನ ಅಡ್ಮಿಷನ್ ಗಾಗಿ ವಿಜಯಲಕ್ಷ್ಮಿ, ಪ್ರೇಮ್ ಮತ್ತು ದಿನಕರ್ ಡಿಸಿಎಂರನ್ನು ಮನೆಗೆ ಬಂದು ಭೇಟಿ ಮಾಡಿ ಅಷ್ಟು ಹೊತ್ತು ಮಾತುಕತೆ ನಡೆಸುವ ಅಗತ್ಯವಿತ್ತೇ ಎಂಬ ಪ್ರಶ್ನೆ ಮೂಡುತ್ತಿದೆ.