ವಿಜಯಲಕ್ಷ್ಮಿ ದರ್ಶನ್ ಭೇಟಿ ಮಾಡಲ್ಲ ಅಂದ್ರೆ ನನ್ನ ನೀವು ದುರಹಂಕಾರಿ ಅನ್ನಲ್ವಾ: ಡಿಕೆ ಶಿವಕುಮಾರ್

Krishnaveni K

ಬುಧವಾರ, 24 ಜುಲೈ 2024 (14:30 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಪತಿ ದರ್ಶನ್ ರನ್ನು ಬಿಡಿಸಿಕೊಳ್ಳಲು ಈಗ ಪತ್ನಿ ವಿಜಯಲಕ್ಷ್ಮಿ ಡಿಸಿಎಂ ಡಿಕೆ ಶಿವಕುಮಾರ್ ರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಡಿಕೆಶಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ಭೇಟಿ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್ ‘ಅವರು ನನ್ನತ್ರ ಕೇಸ್ ಬಗ್ಗೆ ಮಾತನಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ಕೇಸ್ ಬಗ್ಗೆ ಹೇಳಿಲ್ಲ, ನಾವೂ ಏನೂ ಹೇಳಿಲ್ಲ. ಈಗ ಒಬ್ಬ ಹೆಣ್ಣು ಮಗಳು ನಮಗೆ ಅನ್ಯಾಯವಾಗಿದೆ ಅಂತ ಬಂದಾಗ ಅವರ ಸಮಸ್ಯೆ ಕೇಳುವುದು ನಮ್ಮ ಕರ್ತವ್ಯ. ಆ ರೀತಿ ಬಂದಿದ್ದಾರೆ. ಅದಕ್ಕೆ ತನಿಖೆಯಲ್ಲಿ ನಾವು ಯಾವುದೇ ರೀತಿಯಲ್ಲಿ ಮಧ್ಯಪ್ರವೇಶಿಸಲು ಆಗಲ್ಲ ಎಂದು ಹೇಳಿದ್ದೇವೆ. ಈಗಾಗಲೇ ಕೇಸ್ ಕೋರ್ಟ್ ನಲ್ಲಿದೆ. ಕಾನೂನಿನ ಚೌಕಟ್ಟಿನಲ್ಲೇ ಏನು ಮಾಡಬಹುದು, ಮಾಡೋಣ. ನಿನ್ನೆ ದರ್ಶನ್ ಫ್ಯಾನ್ಸ್ ಬೇಲ್ ಕೊಡಿಸಿ ಎಂದು ಕೇಳ್ತಾ ಇದ್ರಿ. ಅವರ ಮಗುವಿಗೆ ಶಾಲೆಯಲ್ಲಿ ಏನು ಸಹಾಯವಾಗಬಹುದೋ ಅದನ್ನು ಮಾಡ್ತೀನಿ. ಕೇಸ್ ವಿಚಾರದಲ್ಲಿ ನಾನು ಸಹಾಯ ಮಾಡಕ್ಕಾಗಲ್ಲ’ ಎಂದು ಖಡಕ್ ಆಗಿ ಹೇಳಿದ್ದಾರೆ.

ಇನ್ನು, ಕೇಸ್ ವಿಚಾರದಲ್ಲಿ ದರ್ಶನ್ ಗೆ ಯಾವುದಾದರೂ ಅನ್ಯಾಯವಾಗಿದೆಯಾ ಎಂದು ನನಗೆ ಗೊತ್ತಿಲ್ಲ. ಟಿವಿಯಲ್ಲಿ ಬರುವುದನ್ನು ನೋಡಿ ಯಾವುದನ್ನೂ ನಿರ್ಧಾರ ತೆಗೆದುಕೊಳ್ಳಲಾಗಲ್ಲ. ನಾನು ಹೋಂ ಮಿನಿಸ್ಟ್ರೂ ಅಲ್ಲ. ನಾನು ಇದರಲ್ಲಿ ಮಧ್ಯಪ್ರವೇಶಿಸಲು ಬಯಸಲ್ಲ’ ಎಂದು ಡಿಕೆಶಿ ಹೇಳಿದ್ದಾರೆ.

ಇನ್ನು, ವಿಜಯಲಕ್ಷ್ಮಿ ನಮ್ಮ ಕ್ಷೇತ್ರದವರೇ. ಅವರ ಮಗ ನಮ್ಮ ಶಾಲೆಯಲ್ಲೇ ಓದುತ್ತಿದ್ದ. ಹೀಗಾಗಿ ನಮ್ಮ ಕ್ಷೇತ್ರದವರೇ ಭೇಟಿಗೆ ಬರುತ್ತೇನೆ ಎಂದಾಗ ಭೇಟಿಯಾಗಲ್ಲ ಎಂದರೆ ನೀವು ಡಿಕೆಶಿಗೆ ಅಹಂಕಾರ ಅನ್ನಲ್ವಾ? ಮನೆ ಬಳಿಗೆ ಬಂದರೂ ಭೇಟಿಯಾಗಲು ಒಪ್ಪಿಲ್ಲ ದರುಹಂಕಾರಿ ಡಿಕೆಶಿ ಎನ್ನುತ್ತೀರ ಅಂತ ನನಗೆ ಗೊತ್ತು ಎಂದು ತಮಾಷೆಯಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ