ಡೀಪ್ ಫೇಕ್ ವಿಡಿಯೋದಿಂದ ಸಂಕಷ್ಟಕ್ಕೀಡಾಗಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿ
ಭಾನುವಾರ, 19 ನವೆಂಬರ್ 2023 (08:40 IST)
ಬೆಂಗಳೂರು: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಡೀಪ್ ಫೇಕ್ ವಿಡಿಯೋ ಎಂಬ ವಿಚಾರ ಭಾರೀ ಸದ್ದು ಮಾಡುತ್ತಿದೆ. ಸೆಲೆಬ್ರಿಟಿಗಳೇ ಈ ನಕಲಿ ವಿಡಿಯೋಗೆ ಟಾರ್ಗೆಟ್ ಆಗುತ್ತಿದ್ದಾರೆ.
ಮೊದಲಿಗೆ ನಟಿ ರಶ್ಮಿಕಾ ಮಂದಣ್ಣರ ಅಶ್ಲೀಲ ನಕಲಿ ವಿಡಿಯೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕತ್ರಿನಾ ಕೈಫ್, ಕಾಜೋಲ್ ನಂತಹ ನಟಿಯರು ಡೀಪ್ ಫೇಕ್ ವಿಡಿಯೋ ಸಂಕಷ್ಟಕ್ಕೀಡಾಗಿದ್ದರು. ಬಳಿಕ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಬೆಂಗಳೂರು ಪೊಲೀಸರು ಡೀಪ್ ಫೇಕ್ ವಿಡಿಯೋದಿಂದ ಸಂಕಷ್ಟಕ್ಕೀಡಾದವರಿಗೆಂದೇ ಸಹಾಯವಾಣಿಯೊಂದನ್ನು ತೆರೆದಿದ್ದಾರೆ. ಒಂದು ವೇಳೆ ನಿಮ್ಮ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ತೊಂದರೆಯಾಗಿದ್ದರೆ 1930 ಎಂಬ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದು.
ಜಾಗೃತರಾಗಿರಿ. ನೀವು ಅಥವಾ ನಿಮಗೆ ತಿಳಿದ ಯಾರಾದರೂ ಡೀಪ್ ಫೇಕ್ ಗೆ ಒಳಗಾಗಿದ್ದಲ್ಲಿ 1930 ಸಂಖ್ಯೆಗೆ ಕರೆ ಮಾಡಿ ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.