ಬೆಂಗಳೂರು: ಜಗ್ಗುದಾದ ಸಿನಿಮಾ ಖ್ಯಾತಿಯ ನಿರ್ಮಾಪಕ ರಾಘವೇಂದ್ರ ಹೆಗ್ಡೆ ತಮ್ಮ ಮೇಲೆ 3 ಕೋಟಿ ರೂ. ವಂಚನೆ ಮಾಡಿದ್ದಾರೆಂದು ನೀಡಿರುವ ದೂರಿಗೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ ಟೀಂ ಸ್ಪಷ್ಟನೆ ನೀಡಿದೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ಮಾಡುತ್ತೇನೆಂದು ತನ್ನಿಂದ 3 ಕೋಟಿ ರೂ. ಅಡ್ವಾನ್ಸ್ ಪಡೆದಿದ್ದರು. ಬಳಿಕ ಸಿನಿಮಾವೂ ಇಲ್ಲ, ಹಣವೂ ವಾಪಸ್ ಮಾಡಿಲ್ಲ. ಕೇಳಿದರೆ ಫೋನ್ ಗೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಆರೋಪಿಸಿ ರಾಘವೇಂದ್ರ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಬಗ್ಗೆ ಧ್ರುವ ಮ್ಯಾನೇಜರ್ ಅಶ್ವಿನ್ ಸ್ಪಷ್ಟನೆ ನೀಡಿದ್ದಾರೆ. ರಾಘವೇಂದ್ರ ಆರೋಪ ಸುಳ್ಳು. 2018 ರಲ್ಲಿ ಸೋಲ್ಜರ್ ಎನ್ನುವ ಸಿನಿಮಾ ಮಾಡಲು 3.15 ಕೋಟಿ ರೂ. ಕೊಟ್ಟಿದ್ದರು. ನಂದಿನಿ ಎಂಟರ್ ಟೈನ್ ಮೆಂಟ್ ನಿಂದ 20 ಲಕ್ಷ ರೂ ಮತ್ತು ರಾಘವೇಂದ್ರ ಕಡೆಯಿಂದ 2.95 ಲಕ್ಷ ರೂ ನೀಡಿದ್ದರು. ಬಳಿಕ ನಂದಿನಿ ಸಂಸ್ಥೆ ಮತ್ತು ನಿರ್ಮಾಪಕರಿಗೆ ಸಮಸ್ಯೆಯಾಗಿದ್ದರಿಂದ 20 ಲಕ್ಷ ರೂ. ಹಿಂದಿರುಗಿಸಿದ್ದೆವು. ಉಳಿದ ಹಣಕ್ಕೆ ಒಂದು ಸಿನಿಮಾ ಮಾಡಿಕೊಡಬೇಕಾಗಿತ್ತು.
ಪ್ರತೀ ಬಾರಿ ಕಾಲ್ ಮಾಡಿದಾಗ ಬ್ಯುಸಿ ಇರುವುದಾಗಿ ಹೇಳುತ್ತಿದ್ದರು. ಕೊನೆಗೆ ನಾಲ್ಕೂವರೆ ವರ್ಷದ ನಂತರ ಮೊದಲಾರ್ಧದ ಸ್ಕ್ರಿಪ್ಟ್ ಬಂತು. ಒಂದು ದಿನ ಸೋಲ್ಜರ್ ಸಿನಿಮಾ ಬಜೆಟ್ ಜಾಸ್ತಿಯಾಗುತ್ತದೆ. ಕನ್ನಡದಲ್ಲಿ ಬೇಡ, ತೆಲುಗು, ಹಿಂದಿಯಲ್ಲಿ ಮಾಡೋಣ ಎಂದರು.
ಧ್ರುವ ಕನ್ನಡದಲ್ಲೇ ಮಾಡಬೇಕು ಎಂದು ಪಟ್ಟು ಹಿಡಿದ ಮೇಲೆ ಕನ್ನಡದಲ್ಲಿ ಮಾಡಲು ಮುಂದಾದರು. ಜೂನ್ 28 ಕ್ಕೆ ಭೇಟಿಯಾದಾಗ ಮತ್ತೆ ತೆಲುಗು, ಹಿಂದಿಯಲ್ಲಿ ಮಾಡೋಣ ಎಂದರು. ಧ್ರುವ ಇದಕ್ಕೆ ಒಪ್ಪಲಿಲ್ಲ. ಕೊನೆಗೆ ಅಕ್ಟೋಬರ್ ನಲ್ಲಿ ಡೇಟ್ ಬೇಕು ಎಂದರು. ಅದಕ್ಕೆ ಧ್ರುವ ಒಪ್ಪಿದ್ದರು. ನಾವು ಪ್ರತೀ ಬಾರಿಯೂ ಕರೆ ಮಾಡಿ ಸಿನಿಮಾ ಬಗ್ಗೆ ಕೇಳುತ್ತಿದ್ದೆವು. ಆದರೆ ಈಗ ಅವರು ಕೇಸ್ ಹಾಕಿ ದುಡ್ಡು ವಾಪಸ್ ಮಾಡಿಲ್ಲ ಎನ್ನುತ್ತಿದ್ದಾರೆ. ಇದನ್ನು ಕಾನೂನು ರೀತಿಯಲ್ಲಿ ಕೋರ್ಟ್ ನಲ್ಲೇ ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.