ತರುಣ್ ಸುಧೀರ್ ಚಿತ್ರತಂಡದ ಮೇಲೆ ಅಧಿಕಾರಿಗಳ ದಾಳಿ: ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ಇಫೆಕ್ಟಾ

Krishnaveni K

ಬುಧವಾರ, 5 ಮಾರ್ಚ್ 2025 (17:38 IST)
ಬೆಂಗಳೂರು: ಇತ್ತೀಚೆಗೆ ಬೆಂಗಳೂರು ಚಿತ್ರೋತ್ಸವಕ್ಕೆ ಗೈರಾದ ಸ್ಟಾರ್ ಕಲಾವಿದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಮುಂದೆ ಏನೇ ಕೆಲಸವಾಗಬೇಕಿದ್ರೂ ನಮ್ಮ ಬಳಿಗೆ ಬರಬೇಕಲ್ಲ. ಆಗ ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂದು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ನಿರ್ದೇಶಕ ತರುಣ್ ಸುಧೀರ್ ಚಿತ್ರತಂಡದ ಮೇಲೆ ಅರಣ್ಯ ಅಧಿಕಾರಿಗಳಿಂದ ದಾಳಿ ನಡೆಸಿದ್ದು, ಇದು ನಟ್ಟು ಬೋಲ್ಟ್ ಹೇಳಿಕೆಯ ಪರಿಣಾಮವೇ ಎಂದು ಅನುಮಾನ ಮೂಡಿದೆ.

ನಿರ್ದೇಶಕ ತರುಣ್ ಸುಧೀರ್ ಈಗ ಹೊಸಬರ ತಂಡ ಕಟ್ಟಿಕೊಂಡು ಸಿನಿಮಾವೊಂದರ ಚಿತ್ರೀಕರಣ ನಡೆಸುತ್ತಿದ್ದಾರೆ. ರಕ್ಷಿತಾ ಪ್ರೇಮ್ ಸಹೋದರ ರಾಣಾ ಈ ಸಿನಿಮಾದ ನಾಯಕ. ಇದೀಗ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾಗ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.

ತುಮಕೂರು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ತರುಣ್ ಸುಧೀರ್ ನಿರ್ಮಾಣದ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಈ ವಿಚಾರ ತಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಅನುಮತಿಯಿಲ್ಲದೇ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಶೂಟಿಂಗ್ ಪರಿಕರಗಳನ್ನು ಹೊತ್ತೊಯ್ದಿದ್ದಾರೆ.

ಇದನ್ನು ಗಮನಿಸಿದರೆ ಇತ್ತೀಚೆಗೆ ಡಿಕೆ ಶಿವಕುಮಾರ್ ನೀಡಿದ ಹೇಳಿಕೆಯ ಪರಿಣಾಮವೇ ಎಂಬ ಅನುಮಾನ ಮೂಡಿಸುವಂತಿದೆ. ಚಿತ್ರೀಕರಣಕ್ಕೆ ಬೇಕೆಂದೇ ಅಡ್ಡಿಪಡಿಸಲಾಗಿದೆಯೇ ಎಂದು ಸಂಶಯ ವ್ಯಕ್ತವಾಗುತ್ತಿದೆ. ಕೆಲವು ದಿನಗಳ ಹಿಂದೆ ಕಾಂತಾರ ಸಿನಿಮಾ, ಟಾಕ್ಸಿಕ್ ಸಿನಿಮಾ ತಂಡದ ಮೇಲೂ ಅರಣ್ಯ ಪ್ರದೇಶ ಬಳಸಿದ ಆರೋಪದ ಮೇಲೆ ದಾಳಿ ನಡೆದಿತ್ತು. ಕನ್ನಡ ಚಿತ್ರರಂಗ ಮೊದಲೇ ಸಂಕಷ್ಟದಲ್ಲಿದೆ. ಇದರ ನಡುವೆ ಚಿತ್ರೀಕರಣಕ್ಕೆ ಈ ರೀತಿ ತೊಂದರೆಯಾಗುತ್ತಿದ್ದರೆ ಸ್ಯಾಂಡಲ್ ವುಡ್ ಯಾವ ರೀತಿ ಪ್ರತಿಕ್ರಿಯಿಸುತ್ತದೆ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ