ಚೆನ್ನೈ: ಹೇಮಾ ಸಮಿತಿ ವರದಿ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಅನೇಕ ನಟಿ ಮಣಿಯರು ಚಿತ್ರರಂಗದಲ್ಲಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಮೌನ ಮುರಿದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ, ಚಿತ್ರರಂಗದಲ್ಲಿ ಮಹಿಳೆಯರು ಲೈಂಗಿಕ ವೇದನೆಗೆ ಗುರಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಎಲ್ಲ ಉದ್ಯಮದಲ್ಲೂ ಇದೇ ರೀತಿಯ ಸನ್ನಿವೇಶಗಳಿವೆ ಎಂದು ನಟಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಅಭಿಪ್ರಾಯಪಟ್ಟಿದ್ದಾರೆ.
ಲೈಂಗಿಕ ಕಿರುಕುಳ ಎದುರಿಸುತ್ತಿರುವುದು ವಿಷಾದದ ಸಂಗತಿಯಾಗಿದೆ. ಧೈರ್ಯದಿಂದ ಮುಂದೆ ಬಂದು ತಮಗಾದ ಹಿಂಸೆಯನ್ನು ಹೇಳಿಕೊಂಡ ಮಹಿಳೆಯರನ್ನು ನಾವು ಶ್ಲಾಘಿಸಬೇಕು. ಕಿರುಕುಳವನ್ನು ಹೊರತರುವಲ್ಲಿ ಹೇಮಾ ಸಮಿತಿಯ ವರದಿ ತುಂಬಾ ಉಪಯುಕ್ತವಾಗಿದೆ. ಮಹಿಳೆಯರು ತಮ್ಮ ವೃತ್ತಿಜೀವನದಲ್ಲಿ ಮೇಲೆ ಬರಲು ಯತ್ನಿಸಿದರೆ ಕಿರುಕುಳವನ್ನು ಎದುರಿಸುತ್ತಾರೆ. ಹೀಗಾಗಿ ಸಂತ್ರಸ್ತೆಯರಿಗೆ ನಮ್ಮ ಬೆಂಬಲ ಬೇಕು. ಅವರ ನೋವನ್ನು ಕೇಳಬೇಕು. ಅವರಿಗೆ ಮಾನಸಿಕವಾಗಿ ಧೈರ್ಯ ನೀಡಿಬೇಕು ಎಂದು ಬರೆದುಕೊಂಡಿದ್ದಾರೆ.
ಹೆಂಡತಿ, ಮಕ್ಕಳನ್ನು ಹಿಂಸಿದ, ಮಗಳಿಗೆ ಲೈಂಗಿಕ ಕಿರುಕುಳ ನೀಡುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಪರಿಗಣಿಸಿದ ವ್ಯಕ್ತಿಯಿಂದ ನನ್ನ ತಾಯಿ ತನ್ನ ವೈವಾಹಿಕ ಸಂಬಂಧದಲ್ಲಿ ನೋವು ಅನುಭವಿಸಿದರು. ನಾನು ಎಂಟನೇ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರೂ, ನನ್ನ ತಾಯಿಗೆ ಹೇಳಿದರೆ ನಂಬುತ್ತಾರೋ ಇಲ್ಲವೋ ಎಂದು ಹೆದರಿದ್ದೆ ಎಂದು ಬರೆದುಕೊಂಡಿದ್ದಾರೆ.