ಬೆಂಗಳೂರು: ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ ನಾಲ್ಕು ವರ್ಷಗಳು ಕಳೆದಿವೆ. ಅಪ್ಪು ನಾಲ್ಕನೇ ಪುಣ್ಯ ತಿಥಿ ದಿನದಂದು ಭಾವುಕ ಸಂದೇಶವೊಂದನ್ನು ಅಶ್ವಿನಿ ಪುನೀತ್ ಬರೆದುಕೊಂಡಿದ್ದಾರೆ.
ಇದೇ ದಿನ 2021 ರಲ್ಲಿ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿದ್ದರು. ಆರೋಗ್ಯವಾಗಿದ್ದ ಅಪ್ಪು ದಿಡೀರ್ ಹೃದಯಸ್ತಂಬನಕ್ಕೊಳಗಾಗಿ ನಮ್ಮನ್ನೆಲ್ಲಾ ದೈಹಿಕವಾಗಿ ಬಿಟ್ಟು ಕಾಣದ ಲೋಕಕ್ಕೆ ತೆರಳಿದ್ದರು. ಆದರೆ ಇಂದಿಗೂ ಅವರನ್ನು ಅಭಿಮಾನಿಗಳು ಸ್ಮರಿಸುತ್ತಲೇ ಇದ್ದಾರೆ.
ಪುನೀತ್ ಪುಣ್ಯತಿಥಿ ನಿಮಿತ್ತ ಅಶ್ವಿನಿ ಪುನೀತ್ ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಅಪ್ಪು ಅವರ ನಾಲ್ಕನೇ ವರ್ಷದ ಸವಿ ನೆನಪಿನಲ್ಲಿ...ನಿಮ್ಮ ದೈನಂದಿನ ಕಾರ್ಯಗಳಲ್ಲಿ ಅಪ್ಪುವನ್ನು ಜೀವಂತವಾಗಿಟ್ಟಿರುವ ಎಲ್ಲರಿಗೂ ಅನಂತಾನಂತ ಕೃತಜ್ಞತೆಗಳು ಎಂದಿದ್ದಾರೆ.
ಇಂದು ಅಪ್ಪು ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ. ಅವರ ಸಮಾಧಿ ಬಳಿ ಪೂಜೆ ಮಾಡಲು ಸಾಕಷ್ಟು ಅಭಿಮಾನಿಗಳು ಬೇರೆ ಬೇರೆ ಜಿಲ್ಲೆಗಳಿಂದ ಬರುತ್ತಿದ್ದಾರೆ. ಈ ರೀತಿ ಬರುವ ಅಭಿಮಾನಿಗಳಿಗಾಗಿ ಅನ್ನದಾನವನ್ನೂ ಏರ್ಪಡಿಸಲಾಗಿದೆ.