ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಮನೆಯಿಂದ ಬಿರಿಯಾನಿ ತರಿಸಿಕೊಂಡು ಊಟ ಮಾಡುವ ಬಗ್ಗೆ ಕನಸು ಕಂಡಿದ್ದೇ ಬಂತು. ಕೋರ್ಟ್ ಮತ್ತೆ ಅವರ ಆಸೆಗೆ ತಣ್ಣೀರೆರಚಿದೆ.
ನಟ ದರ್ಶನ್ ಜೈಲಿನ ಊಟ ಒಗ್ಗುತ್ತಿಲ್ಲ, ತೂಕ ಕಡಿಮೆಯಾಗುತ್ತಿದೆ ಎಂದು ಮನೆ ಊಟ ಹಾಗೂ ಕೈ ಶಸ್ತ್ರಚಿಕಿತ್ಸೆಯಾಗಿರುವುದರಿಂದ ಮನೆಯಿಂದ ಹಾಸಿಗೆ, ಓದಲು ಪುಸ್ತಕ ತರಿಸಿಕೊಳ್ಳಲು ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಗೆ ಸಲ್ಲಿಸಿದ್ದ ರಿಟ್ ಅರ್ಜಿಯ ತೀರ್ಪು ಇಂದು ಬರಬೇಕಿತ್ತು.
ಆದರೆ ಇಂದು ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ಮತ್ತೆ ಸೆಪ್ಟೆಂಬರ್ 5 ರವರೆಗೆ ಮುಂದೂಡಿದೆ. ಆಗಸ್ಟ್ 28 ರವರೆಗೆ ದರ್ಶನ್ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಲಾಗಿತ್ತು. ಅದಾದ ಬಳಿಕವೂ ಅವರ ನ್ಯಾಯಾಂಗ ಬಂಧನ ಅವಧಿ ಮುಂದುವರಿಯುವ ಸಾಧ್ಯತೆಯಿದೆ. ಆದರೆ ಈ ನಡುವೆ ಮನೆ ಊಟಕ್ಕಾಗಿ ಸಲ್ಲಿಸಿದ ಅರ್ಜಿಯ ತೀರ್ಪನ್ನು ಕೋರ್ಟ್ ಮುಂದೂಡಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಎರಡು ಬಾರಿ ಅಸ್ವಸ್ಥರಾಗಿದ್ದರು. ಒಮ್ಮೆ ಅಜೀರ್ಣ ಸಮಸ್ಯೆಗೊಳಗಾಗಿದ್ದರೆ, ಮತ್ತೊಮ್ಮೆ ಜ್ವರಕ್ಕೆ ತುತ್ತಾಗಿದ್ದರು. ಸದಾ ಐಷಾರಾಮಿ ಜೀವನಕ್ಕೆ ಒಗ್ಗಿಹೋಗಿದ್ದ ದರ್ಶನ್ ಗೆ ಜೈಲಿನ ಅನ್ನ, ಸಾಂಬಾರ್ ನುಂಗುವುದೇ ಕಷ್ಟವಾಗುತ್ತಿದೆ.