ಜಾಮೀನು ಅರ್ಜಿ ಸಲ್ಲಿಸಿದ ಪವಿತ್ರಾ ಗೌಡಗೆ ಸಿಗುತ್ತಾ ಬಿಡುಗಡೆಯ ಭಾಗ್ಯ

Krishnaveni K

ಮಂಗಳವಾರ, 20 ಆಗಸ್ಟ್ 2024 (10:10 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ 75 ದಿನಗಳ ಜೈಲು ವಾಸದ ಬಳಿಕ ಈಗ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಒಟ್ಟು 17 ಮಂದಿಯನ್ನು ಬಂಧಿಸಲಾಗಿದೆ. ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ ನಟ ದರ್ಶನ್ ಎ2 ಆರೋಪಿಯಾಗಿದ್ದಾರೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತರಲು ಸಹಾಯ ಮಾಡಿದವರು ಸೇರಿದಂತೆ ಎಲ್ಲರೂ ಈಗ ಬಂಧನದಲ್ಲೇ ಇದ್ದಾರೆ.

ಈ ಪೈಕಿ ಈಗ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ7 ಆರೋಪಿಯಾಗಿರುವ ಅನುಕುಮಾರ್ ಸೇರಿದ್ದಾರೆ. ಈ ಇಬ್ಬರೂ ಆರೋಪಿಗಳೂ ಈಗ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾ ಕಾರಣಕ್ಕೇ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಲಾಗಿತ್ತು ಎಂಬುದು ಆರೋಪ. ಆದರೆ ಅನುಕುಮಾರ್ ಹತ್ಯೆ ನಡೆದ ಶೆಡ್ ಒಳಗೂ ಹೋಗಿರಲಿಲ್ಲ. ಆದರೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತರಲು ಸಹಾಯ ಮಾಡಿದ್ದ.

ಅನುಕುಮಾರ್ ಹಲ್ಲೆ ನಡೆದ ಶೆಡ್ ಒಳಗೆ ಹೋಗಿರಲಿಲ್ಲ, ಶವ ಎಸೆಯುವುದಕ್ಕೂ ಸಹಾಯ ಮಾಡಿರಲಿಲ್ಲ. ಹೀಗಾಗಿ ಅವರಿಗೆ ಜಾಮೀನು ನೀಡುವಂತೆ ಅವರ ವಕೀಲರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾ ಗೌಡ ಪರ ಹಿರಿಯ ವಕೀಲೆ ರೇನಿ ಸೆಬಾಸ್ಟಿಯನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.  ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ತಯಾರಿ ನಡೆಸಿರುವಾಗಲೇ ಪವಿತ್ರಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಪ್ರಕರಣದಲ್ಲಿ ಪವಿತ್ರಾ ಎ1 ಆರೋಪಿಯಾಗಿದ್ದು ಆಕೆಗೆ ಜಾಮೀನು ಸಿಗುವುದು ಸುಲಭವಲ್ಲ ಎಂದೇ ತಜ್ಞರು ಹೇಳುತ್ತಿದ್ದಾರೆ. ಇನ್ನು, ಚಾರ್ಜ್ ಶೀಟ್ ನಲ್ಲಿ ಆಕೆಯ ಮೇಲೆ ಪೊಲೀಸರು ಏನೆಲ್ಲಾ ಆರೋಪಪಟ್ಟಿ ದಾಖಲಿಸುತ್ತಾರೆ ಎಂಬುದೂ ಮುಖ್ಯವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ