ಬೆಂಗಳೂರು: ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಎನ್ನುವಂತಹ ಯಾವುದೇ ಸಿನಿಮಾ ಹೊರಬಂದಿಲ್ಲ. ಜನರು ಥಿಯೇಟರ್ ಗೆ ಬರುವುದೇ ಕಡಿಮೆಯಾಗಿದೆ. ಇದರ ಬೆನ್ನಲ್ಲೇ ನಟ ಜಗ್ಗೇಶ್ ಚಿತ್ರರಂಗದ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಶೋ ವೇದಿಕೆಯಲ್ಲಿ ಜಗ್ಗೇಶ್ ಕನ್ನಡ ಚಿತ್ರರಂಗದ ಪ್ರಸಕ್ತ ಪರಿಸ್ಥಿತಿ ಕುರಿತು ಮಾತನಾಡುತ್ತಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ಸಿನಿಮಾ ನೋಡಲು ಜನರೇ ಥಿಯೇಟರ್ ಗೆ ಬರುತ್ತಿಲ್ಲ. ಹೀಗಾದರೆ ಚಿತ್ರರಂಗ ವಾಶ್ ಔಟ್ ಆಗುತ್ತದೆ ಎಂದು ಭಾವುಕರಾಗಿದ್ದಾರೆ. ಅವರನ್ನು ನೋಡಿ ಇತರರೂ ಕಣ್ಣೀರು ಹಾಕಿದ್ದಾರೆ.
ಎಲ್ಲರೂ ಒಳ್ಳೆಯ ಸಿನಿಮಾಗಳನ್ನೇ ಮಾಡುತ್ತಾರೆ. ಒಳ್ಳೆಯ ಪ್ರಚಾರವನ್ನೂ ಕೊಡುತ್ತಾರೆ. ಟಿವಿ, ಪೇಪರ್ ಗಳಲ್ಲಿ ಜಾಹೀರಾತು ಕೊಡುತ್ತಾರೆ. ಆದರೆ ಸಿನಿಮಾ ಬಿಡುಗಡೆಯಾದಾಗ ಥಿಯೇಟರ್ ಗೆ ಜನರೇ ಬರುವುದಿಲ್ಲ. ಯಾಕೆ ಇಂಥಾ ಪರಿಸ್ಥಿತಿ ಕನ್ನಡ ಚಿತ್ರರಂಗಕ್ಕೆ ಬಂತು. ಬರೀ ಕನ್ನಡ ಚಿತ್ರರಂಗವೇ ಹೀಗಾ ಅಂದರೆ ಖಂಡಿತಾ ಅಲ್ಲ. ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಟನೆಯ ಸಾಲು ಸಾಲು ಸಿನಿಮಾಗಳು ಸೋತಿವೆ. ಅವರಂತೂ ಡಿಸಾಸ್ಟರ್ ಆಗಿಬಿಟ್ಟಿದ್ದಾರೆ. ಏನಾಗುತ್ತಿದೆ ಚಿತ್ರರಂಗಕ್ಕೆ? ಹೇಗೆ ಸಿನಿಮಾ ಮಾಡಬೇಕು ಎಂದೇ ಗೊತ್ತಾಗುತ್ತಿಲ್ಲ. ಇಡೀ ಭಾರತದಲ್ಲಿ ಸಿನಿಮಾ ಸತ್ತು ಹೋಗಿದೆ. ಈಗೆಲ್ಲಾ ಹೇಗಾಗಿದೆ ಎಂದರೆ ಯಾರು 200 ಕೋಟಿ ರೂಪಾಯಿ ಹಾಕಿ ಸಿನಿಮಾ ಮಾಡುತ್ತಾರೋ ಅದಷ್ಟೆ ಸಿನಿಮಾ ಎಂದಾಗಿದೆ. ಒಳ್ಳೆ ಕತೆ ಮಾಡಿ ಸಣ್ಣ ಸಿನಿಮಾ ಮಾಡುತ್ತಾರೋ ಅದು ಸಿನಿಮಾವೇ ಅಲ್ಲ ಎಂಬಂತಾಗಿದೆ. ಹೀಗಾದರೆ ಉಳಿದವರು ಬದುಕುವುದು ಹೇಗೆ?
ಇನ್ನು ಕೆಲವು ನಮ್ಮವರೇ ನಮ್ಮ ಸಿನಿಮಾವನ್ನು ಕೆಟ್ಟ ಸಿನಿಮಾ ನೋಡೋದೇ ವೇಸ್ಟ್ ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿ ಇನ್ನೊಬ್ಬರ ಜೀವನವನ್ನು ಹಾಳು ಮಾಡುತ್ತಾರೆ. ಇರಲಿ, ನಾನು ಯಾರನ್ನೂ ಟೀಕಿಸಲು ಹೋಗುವುದಿಲ್ಲ. ನನಗೆ ಎಲ್ಲವನ್ನೂ ಕೊಟ್ಟಿರುವುದು ಸಿನಿಮಾ. ಆದ್ದರಿಂದ ಭಾವುಕನಾದೆ ಎಂದಿದ್ದಾರೆ. ಅವರ ಮಾತುಗಳನ್ನು ಕೇಳಿ ಉಳಿದೆಲ್ಲರ ಕಣ್ಣಂಚಿನಲ್ಲೂ ನೀರು ಬಂದಿತ್ತು.