ಬೆಂಗಳೂರು: ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡುವಾಗ ಕಿತ್ತೋದ್ ನನ್ ಮಗ ಎಂದು ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಜಗ್ಗೇಶ್ ಈಗ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ರಂಗನಾಯಕ ಸಿನಿಮಾ ಕಾರ್ಯಕ್ರಮದಲ್ಲಿ ಜಗ್ಗೇಶ್ ಹುಲಿ ಉಗುರು ಪ್ರಕರಣವನ್ನು ಪ್ರಸ್ತಾಪಿಸಿದ್ದರು. ಯಾವನೋ ಕಿತ್ತೋದ್ ನನ್ ಮಗ ಹುಲಿ ಉಗುರು ಹಾಕಿಕೊಂಡು ಟಿವಿಯಲ್ಲಿ ಹೋಗಿ ಸಿಕ್ಕಿಹಾಕಿಕೊಂಡು ಬಿಟ್ಟ ಎಂದಿದ್ದರು. ಅವರು ಹೀಗೆ ಪರೋಕ್ಷವಾಗಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಗ್ಗೆ ಹೇಳಿದ್ದರು. ಇದು ಸಂತೋಷ್ ಅಭಿಮಾನಿಗಳನ್ನು ಕೆರಳಿಸಿತ್ತು. ಜಗ್ಗೇಶ್ ಕ್ಷಮೆ ಕೇಳದೇ ಇದ್ದರೆ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದರು.
ವರ್ತೂರು ಸಂತೋಷ್ ಹುಲಿ ಉಗುರು ಧರಿಸಿ ಬಿಗ್ ಬಾಸ್ ಶೋನಲ್ಲಿರುವಾಗಲೇ ಬಂಧನಕ್ಕೊಳಗಾಗಿದ್ದರು. ಇದಾದ ಬಳಿಕ ಹಲವು ಸೆಲೆಬ್ರಿಟಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು. ಈ ವಿಚಾರವನ್ನು ಜಗ್ಗೇಶ್ ಮಾತಿನ ಮಧ್ಯೆ ಪ್ರಸ್ತಾಪಿಸಿದ್ದರು. ಆ ರೀತಿ ವಿಚಾರಣೆಗೊಳಪಟ್ಟವರಲ್ಲಿ ಜಗ್ಗೇಶ್ ಕೂಡಾ ಒಬ್ಬರಾಗಿದ್ದರು. ಈ ವಿಚಾರವನ್ನು ಹೇಳುವಾಗ ಮಾತಿನ ಭರದಲ್ಲಿ ಅವರು ಆ ಒಂದು ಶಬ್ಧ ಬಳಕೆ ಮಾಡಿದ್ದು ವರ್ತೂರು ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ.
ಇದೀಗ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವ ಜಗ್ಗೇಶ್, ನನ್ನ ಹೇಳಿಕೆಯನ್ನು ತಿರುಚಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ. ತಪ್ಪು ಸಂದೇಶ ಕೊಟ್ಟು ಜಾತಿ ಗಲಭೆಗೆ, ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷ ಪ್ರಚೋದನೆ ನೀಡಲಾಗುತ್ತಿದೆ. ಕಿತ್ತೋದ್ ನನ್ ಮಗ ಎಂಬುದು ಗ್ರಾಮೀಣ ಭಾಷೆಯಾಗಿದ್ದು, ಅದನ್ನು ತಿರುಚಿ ಪ್ರಚೋದಿಸಲಾಗುತ್ತಿದೆ. ನನ್ನ ವಿರುದ್ಧ ಜಾತಿನಿಂದನೆ, ಅವಾಚ್ಯ ಶಬ್ಧಗಳ ಬಳಕೆ, ಮುಖಕ್ಕೆ ಕಪ್ಪು ಮಸಿ ಬಳಿಯುವ ಬೆದರಿಕೆ ಹಾಕಲಾಗಿದೆ ಎಂದು ಜಗ್ಗೇಶ್ ಆರೋಪಿಸಿದ್ದಾರೆ. ಈ ಸಂಬಂಧ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.