ಜೇಮ್ಸ್ ಥಿಯೇಟರ್ ನಿಂದ ತೆಗೆಯಲು ಬಿಜೆಪಿ ಒತ್ತಡ ಹಾಕಿಲ್ಲ: ನಿರ್ಮಾಪಕ ಕಿಶೋರ್
ಬುಧವಾರ, 23 ಮಾರ್ಚ್ 2022 (17:59 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯ ಸಿನಿಮಾ ಜೇಮ್ಸ್ ಎರಡೇ ವಾರಕ್ಕೆ ಥಿಯೇಟರ್ ನಿಂದ ಕಿತ್ತು ಹಾಕಲು ಬಿಜೆಪಿ ನಾಯಕರಿಂದ ಒತ್ತಡ ಬಂದಿದೆ ಎಂಬ ಆರೋಪವನ್ನು ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಿರಾಕರಿಸಿದ್ದಾರೆ.
ಜೇಮ್ಸ್ ಕಿತ್ತು ಹಾಕಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಹಾಕಬೇಕೆಂದು ಕೆಲವು ಥಿಯೇಟರ್ ಮಾಲಿಕರಿಗೆ ಬಿಜೆಪಿ ಮುಖಂಡರಿಂದ ಒತ್ತಡ ಬಂದಿದೆ ಎಂಬ ವರದಿಗಳ ಬೆನ್ನಲ್ಲೇ ಅಪ್ಪು ಅಭಿಮಾನಿಗಳು ಗರಂ ಆಗಿದ್ದರು. ಜೊತೆಗೆ ಈ ವಿದ್ಯಮಾನದ ಬಗ್ಗೆ ನಿರ್ಮಾಪಕರು ವಿಪಕ್ಷ ನಾಯಕ ಸಿದ್ಧರಾಮಯ್ಯ ಬಳಿ ದೂರು ನೀಡಿದ್ದಾರೆ ಎಂದೂ ವರದಿಯಾಗಿತ್ತು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಿಶೋರ್ ಬಿಜೆಪಿ ನಾಯಕರು ಥಿಯೇಟರ್ ಮಾಲಿಕರ ಮೇಲೆ ಒತ್ತಡ ಹಾಕಿಲ್ಲ. ಆದರೆ ಜೇಮ್ಸ್ ಸಿನಿಮಾ ತೆಗೆಯಲು ಬೇರೆ ಯಾರೋ ಒತ್ತಡ ಹೇರುತ್ತಿದ್ದಾರೆ. ನಾನು ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದು ಜೇಮ್ಸ್ ಸಿನಿಮಾ ವೀಕ್ಷಿಸಲು ಆಹ್ವಾನಿಸಲು. ಇನ್ನು, ಸಿಎಂ ಬಸವರಾಜ ಬೊಮ್ಮಾಯಿವರನ್ನೂ ಭೇಟಿಯಾಗಿ ಆಹ್ವಾನ ನೀಡುತ್ತೇನೆ. ಸಿಎಂ ಸಾಹಬೇರು ಅಪ್ಪು ಅಣ್ಣ ಮತ್ತು ದೊಡ್ಮನೆ ಮೇಲೆ ಸಾಕಷ್ಟು ಅಭಿಮಾನ ಇಟ್ಟುಕೊಂಡಿದ್ದಾರೆ. ಅವರ ಕುಟುಂಬಕ್ಕೆ, ಚಿತ್ರರಂಗಕ್ಕೆ ಯಾವತ್ತೂ ಬೆಂಬಲವಾಗಿದ್ದರು. ಹೀಗಾಗಿ ಅವರ ಬಳಿ ಜೇಮ್ಸ್ ಸಿನಿಮಾ ಕಿತ್ತು ಹಾಕುತ್ತಿರುವುದರ ಬಗ್ಗೆ ಹೇಳುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.