ಖ್ಯಾತ ರಂಗಕರ್ಮಿ, ನಟ ಅಶೋಕ್ ಬಾದರದಿನ್ನಿ ಇನ್ನಿಲ್ಲ
ಬೆಂಗಳೂರು: ಕನ್ನಡ ಚಿತ್ರರಂಗ ಪೋಷಕ ನಟ, ಖ್ಯಾತ ರಂಗಕರ್ಮಿ ಅಶೋಕ್ ಬಾದರದಿನ್ನಿ ಚಿತ್ರದುರ್ಗದಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಚಿತ್ರದುರ್ಗದಲ್ಲೇ ಅವರ ಅಂತ್ಯಕ್ರಿಯೆ ನಡೆಯಲಿದೆ.
ಅಶೋಕ್ 200 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದು, ಹಲವು ನಾಟಕ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದರು. ರವಿಚಂದ್ರನ್ ಅಭಿನಯದ ಅಂಜದ ಗಂಡು ಸಿನಿಮಾದಲ್ಲಿ ನಾಯಕನ ಸ್ನೇಹಿತನ ಪಾತ್ರ ಮಾಡಿದ್ದರು. ಇದಲ್ಲದೆ ಮನ ಮೆಚ್ಚಿದ ಹುಡುಗಿ ಸೇರಿದಂತೆ 80 ಸಿನಿಮಾಗಳಲ್ಲಿ ಅಭಿನಯಿಸಿದ್ದಲ್ಲದೆ 300 ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ಅಭಿನಯಿಸಿದ್ದರು.