ಬೆಂಗಳೂರು: ಕನ್ನಡ ಕಿರುತೆರೆಯ ಹೀರೋಗಳು ತೆರೆ ಮೇಲೆ ನಿಜವಾಗಿ ಹೀರೋಗಳಾಗಿ ವಿಜೃಂಭಿಸುತ್ತಾರೆ. ಆದರೆ ರಿಯಲ್ ಲೈಫ್ ನಲ್ಲೂ ಕೆಲವು ನಟರು ಹೀರೋಗಳಾಗಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಾವು ರಿಯಲ್ ಲೈಫ್ ಹೀರೋಗಳು ಎಂದು ಸಾಬೀತುಪಡಿಸಿದ್ದಾರೆ. ಅಂತಹ ನಟರು ಯಾರು ಎಂದು ನೋಡೋಣ.
ಕಿರಣ್ ರಾಜ್: ಕನ್ನಡತಿ ಖ್ಯಾತಿಯ ನಟ ಕಿರಣ್ ರಾಜ್ ತಮ್ಮದೇ ಫೌಂಡೇಷನ್ ಸ್ಥಾಪಿಸಿ ತಮ್ಮ ಗೆಳೆಯರೊಡನೆ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೋನಾ ಸಮಯದಲ್ಲಂತೂ ಅದೆಷ್ಟೋ ಜನರಿಗೆ ಇವರು ಅನ್ನದಾತರಾಗಿದ್ದರು. ಈಗಲೂ ಬಡ, ಅನಾಥರಿಗೆ, ತೃತೀಯ ಲಿಂಗಿಗಳಿಗೆ ತಮ್ಮ ಸೇವೆ ಮುಂದುವರಿಸುತ್ತಿದ್ದಾರೆ.
ರಿತ್ವಿಕ್ ಕೃಪಾಕರ್: ರಿತ್ವಿಕ್ ಕೃಪಾಕರ್ ಎಂದರೆ ಯಾರಿಗೂ ಗೊತ್ತಾಗಲ್ಲ. ಆದರೆ ರಾಮಚಾರಿ ಧಾರವಾಹಿಯ ಹೀರೋ ರಾಮಚಾರಿ ಎಂದರೆ ಎಲ್ಲರಿಗೂ ಗೊತ್ತಿರುತ್ತದೆ. ಅವರು ತಮ್ಮದೇ ಆರ್ ಕೆ ಫೌಂಡೇಷನ್ಸ್ ಎಂದು ಸ್ಥಾಪಿಸಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಾಣಿ ಸಂರಕ್ಷಣೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ಅನಿರುದ್ಧ್ ಜತ್ಕಾರ್: ಸಾಹಸಸಿಂಹ ವಿಷ್ಣುವರ್ಧನ್ ಅಳಿಯ, ಜೊತೆ ಜೊತೆಯಲಿ ಧಾರವಾಹಿಯ ನಾಯಕರಾಗಿದ್ದ ಅನಿರುದ್ಧ್ ಜತ್ಕಾರ್ ಸ್ವಚ್ಛತಾ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಬಿಬಿಎಂಪಿ ಅಧಿಕಾರಿಗಳ ಜೊತೆ ಕೈ ಜೋಡಿಸಿದ್ದಾರೆ. ನಗರದಲ್ಲಿ ಅಸ್ವಚ್ಛವಾಗಿರುವ ಪ್ರದೇಶಗಳಿಗೆ ತೆರಳಿ ತಾವೇ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಇವರಿಂದಾಗಿ ಎಷ್ಟೋ ಪ್ರದೇಶಗಳು ಸ್ವಚ್ಛವಾಗಿದೆ.
ಪೃಥ್ವಿ ರಾಜ್: ದೊರೆಸಾನಿ ಎನ್ನುವ ಧಾರವಾಹಿಯಲ್ಲಿ ನಾಯಕರಾಗಿ ಅಭಿನಯಿಸಿದ್ದ ಪ್ರಸ್ತುತ ತಮಿಳು ಮತ್ತು ತೆಲುಗು ಧಾರವಾಹಿಯ ನಾಯಕರಾಗಿರುವ ಪೃಥ್ವಿ ರಾಜ್ ಅನಾಥ ಮಕ್ಕಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬವನ್ನೂ ಅವರು ಅನಾಥ ಮಕ್ಕಳೊಂದಿಗೆ ಆಚರಿಸಿಕೊಂಡಿದ್ದರು.