ಕಾಶಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಕನ್ನಡ ಕಿರುತೆರೆ ನಟಿ ಕಾವ್ಯಾ ಶಾಸ್ತ್ರಿ: ಕಾರಣ ಕೇಳಿದ್ರೆ ಶಾಕ್

Sampriya

ಮಂಗಳವಾರ, 11 ಮಾರ್ಚ್ 2025 (16:27 IST)
Photo Courtesy X
ಬಿಗ್‌ಬಾಸ್ ಖ್ಯಾತಿಯ, ನಟಿ ಕಾವ್ಯಾ ಶಾಸ್ತ್ರಿ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಭಿಕ್ಷೆ ಬೇಡಿ ಅದರಿಂದ ಬಂದ ಹಣದಿಂದ ಊಟ ಮಾಡಿದ್ದಾರೆ. ಇನ್ನೂ ಭಿಕ್ಷೆ ಬೇಡಿ ಊಟ ಮಾಡಿದರ ಬಗ್ಗೆಯೂ ಅವರು ಕಾರಣ ಬಿಚ್ಚಿಟ್ಟಿದ್ದಾರೆ.  ಕೊರೊನಾ ಎಂಬ ಮಹಾಮಾರಿ ಯಾರನ್ನೂ ಬಿಟ್ಟಿಲ್ಲ.ಕೋಟಿಗಟ್ಟಲೇ ದುಡ್ಡಿದ್ದರು ಯಾರೂ ಇಲ್ಲದವರಂತೆ ಸ್ಮಶಾನ ಸೇರಿದವರೆಷ್ಟೋ ಅದೆಷ್ಟೂ ಮಂದಿ. ಕೊರೊನಾದಿಂದಾಗಿ ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ನಟಿ ಕಾವ್ಯ ಶಾಸ್ತ್ರಿ ತಂದೆಯೂ ಕೂಡಾ ಸಂಕಷ್ಟಕ್ಕೆ ಸಿಲುಕಿದ್ದರು. ತನ್ನ ತಂದೆಯನ್ನು ಪ್ರಾಣಪಾಯದಿಂದ ಪಾರು ಮಾಡಿದರೆ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಭಿಕ್ಷೆ ಬೇಡಿ, ಅಂದಿನ ಊಟವನ್ನು ಮಾಡುತ್ತೇನೆ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ.

ಇದೀಗ ಕಾಶಿನಾಥನ ಸನ್ನಿಧಿಯಲ್ಲಿ ಭಿಕ್ಷೆ ಬೇಡಿ ಅದರ ಹಣದಿಂದ ಊಟ ಮಾಡಿ, ಹರಕೆ ತೀರಿಸಿದ್ದಾರೆ. ಈ ಬಗ್ಗೆ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿ ಹೇಳಿಕೊಂಡಿದ್ದಾರೆ.

'ಕೊರೊನಾ ಯಾರನ್ನೂ ಬಿಟ್ಟಿಲ್ಲ. 2020ರಲ್ಲಿ ನನ್ನ ತಂದೆ ಕೊರೊನಾ ಸೋಂಕಿಗೆ ಒಳಗಾಗಿ ಇನ್ನೇನು ನನ್ನ ತಂದೆ ಸಾವನ್ನಪ್ಪುತ್ತಾರೆ ಅನ್ನುವ ಭಯದಲ್ಲಿ ಸಿಕ್ಕ ಸಿಕ್ಕ ದೇವರಿಗೆ ಸಿಕ್ಕ ಸಿಕ್ಕ ಹರಕೆ ಹೊತ್ತಿದ್ದೆ. ಅದರಲ್ಲಿ ಒಂದು ಕಾಶಿ ವಿಶ್ವನಾಥ. ಕಾಶಿ ವಿಶ್ವನಾಥನಲ್ಲಿ, ನನ್ನ ತಂದೆಯ ಜೀವದ ಭಿಕ್ಷೆ ಕೊಡು. ನಿನ್ನ ಸನ್ನಿಧಾನದಲ್ಲಿ ಭಿಕ್ಷೆ ಬೇಡಿ ಅದರಿಂದ ಬರುವ ಹಣದಲ್ಲಿ ಒಂದಿಡಿ ದಿನದ ಊಟ ಮಾಡುತ್ತೀನಿ ಅಂತ. ಅದನ್ನು ನೆರವೇರಿಸುವಂತಹ ಸೌಭಾಗ್ಯ ಮೊನ್ನೆ ನಾನು ಹೋದಾಗ ಸಿಕ್ಕಿತು. ಇದೇನು ಅಂಧ ವಿಶ್ವಾಸ ಅಂತ ನೀವು ಕೇಳಬಹುದು. ಒಂದು ಹೇಳ್ತೀನಿ ಕೇಳಿ. ಕಷ್ಟದಲ್ಲಿದ್ದಾಗ ಅದನ್ನು ನಿವಾರಿಸಿಕೊಳ್ಳಲು ಏನನ್ನಾದರೂ ಮಾಡುವ ಪರಿಸ್ಥಿತಿಗೆ ಬಂದು ಬಿಡ್ತೀವಿ'

ಹಿಂದೂ ಧರ್ಮದಲ್ಲಿ ಭಿಕ್ಷಾಟನೆಗೆ ಒಂದು ಪವಿತ್ರವಾದ ಸ್ಥಾನವಿದೆ. ಅದು ನಾನು, ನನ್ನದು ಅನ್ನೋ ಅಹಂಕಾರ ಮತ್ತು ಮೋಹ ಎಲ್ಲದನ್ನೂ ಕಲಿಸಿಬಿಡುತ್ತದೆ. ಒಬ್ಬರ ಮುಂದೆ ಕೈ ಚಾಚಿ ಭಿಕ್ಷೆ ಕೊಡು ಎಂದು ಕೇಳಬೇಕಾದರೆ ದುರಹಂಕಾರ ಎಲ್ಲಾ ಕಳೆದು ಹೋಗಿಬಿಡುತ್ತೆ. ಇದೇ ಭಿಕ್ಷಾಟನೆಯ ಪಾವಿತ್ರ್ಯತೆ. ಭಿಕ್ಷೆ ಕೊಡುವವರು ತಮ್ಮ ಪಾಪ ಕಳೆದುಕೊಳ್ಳುತ್ತಾರೆ. ತೆಗೆದುಕೊಳ್ಳುವವರು, ತಮ್ಮ ಅಹಂಕಾರವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ಹೇಳೋದು, ಈ ದುಡ್ಡು, ಹೆಸರು ಎಲ್ಲಾ ಜೀವದ ಮುಂದೆ ಏನೇನೂ ಇಲ್ಲ. ಈ ಜೀವ ಅನ್ನೋದೇ ಪರಮಾತ್ಮನ ಭಿಕ್ಷೆ. ಅದನ್ನು ಯಾವತ್ತೂ ಅಹಂಕಾರದಿಂದ ಮರೆಯಬಾರದು. ಒಟ್ನಲ್ಲಿ ಇವತ್ತು ನಾನು ನನ್ನ ತಂದೆ ತಾಯಿ ಜೊತೆಗೆ ಖುಷಿಯಾಗಿದ್ದೀನಿ. ಎಲ್ಲವೂ ಆ ದೇವರ ದಯೆ ಎಂದು ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ