ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಹಾಗೂ ಫೋಟೋಗಳನ್ನು ಟ್ರೋಲ್ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ರಾಜ್ಯ ಮಹಿಳಾ ಆಯೋಗ ಎಂಟ್ರಿಕೊಟ್ಟಿದೆ. ಈ ಸಂಬಂಧ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಪತ್ರ ಬರೆದಿದ್ದಾರೆ.
ಈಗಾಗಲೇ ನಟಿ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳೆಂದು ಸೋಶಿಯಲ್ ಮೀಡಿಯಾದಲ್ಲಿ ಬೆದರಿಕೆ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ ಸಂಬಂಧ ದೂರು ದಾಖಲಾಗಿದೆ. ಈಗಾಗಲೇ 9ಮಂದಿಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದರ್ಶನ್ ಮತ್ತೇ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ಮೇಲೆ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್‌ನನ್ನು ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್ ಹಾಗೂ ಫೋಟೋಗಳನ್ನು ಕೋಲಾಜ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಈ ವಿಚಾರ ಸಂಬಂಧ ಮಹಿಳಾ ಆಯೋಗ ಎಂಟ್ರಿ ಕೊಟ್ಟು ದೂರು ನೀಡಿದೆ.
ಈ ಪತ್ರದಲ್ಲಿ ನಟ ದರ್ಶನ್ ಅವರ ಪತ್ನಿ ಹಾಗೂ ಪುತ್ರನ ಬಗ್ಗೆ ಅಶೀಲವಾಗಿ ಕಾಮೆಂಟ್ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಭಾಸ್ಕರ್ ಪ್ರಸಾದ್ ಎಂಬ ವ್ಯಕ್ತಿಯ ಮನವಿಯ ಮೇರೆಗೆ ನಾಗಲಕ್ಷ್ಮಿ ಚೌಧರಿ ಅವರು ಬೆಂಗಳೂರು ಪೊಲೀಸರಿಗೆ ಈ ಪತ್ರ ಬರೆದಿದ್ದಾರೆ.
ಈ ಪತ್ರದ ವಿಚಾರ ಹೀಗಿದೆ. “ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಶ್ರೀ ಬಿ. ಆರ್ ಭಾಸ್ಕರ್ ಪ್ರಸಾದ್, ಸಾಮಾಜಿಕ ಹೋರಾಟಗಾರರು, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಇವರು ಆಯೋಗದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿಯಲ್ಲಿ ಅರ್ಜಿದಾರರು ಖ್ಯಾತ ನಟ ದರ್ಶನ್ ರವರ ಧರ್ಮ ಪತ್ನಿಯಾದ ವಿಜಯಲಕ್ಷ್ಮೀ ದರ್ಶನ್ ಹಾಗೂ ಇವರ ಮಗನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡುತ್ತಿರುವುದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣಿನ ಸ್ವಾಭಿಮಾನ ಹಾಗೂ ಗೌರವಕ್ಕೆ ಧಕ್ಕೆ ತರುವಂತಹ ಪೋಸ್ಟ್ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಹಾಗೂ ರಕ್ಷಣೆ ಒದಗಿಸುವಂತೆ ಮನವಿ ಮಾಡಿರುತ್ತಾರೆ. (ಅರ್ಜಿದಾರರ ಅರ್ಜಿಯ ಪ್ರತಿಯನ್ನು ಲಗತ್ತಿಸಿದೆ).”
ಸೂಕ್ತ ಆದ್ದರಿಂದ ಅರ್ಜಿದಾರರ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ 15 ದಿನಗಳೊಳಾಗಿ ಸಲ್ಲಿಸುವಂತೆ ಕೋರಿದೆ ಎಂದು ಉಲ್ಲೇಖಿಸಲಾಗಿದೆ.