ಗಟ್ಟಿಮೇಳ ಒಂದೇ ನನಗೆ ಜೀವನ ಅಲ್ಲ! ಹೀಗಂದಿದ್ಯಾಕೆ ಹೀರೋ ರಕ್ಷ್?

ಶುಕ್ರವಾರ, 8 ಡಿಸೆಂಬರ್ 2023 (13:05 IST)
File photo
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರವಾಹಿ ಕೊನೆಯ ಹಂತಕ್ಕೆ ಬಂದು ನಿಂತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಧಾರವಾಹಿ ಮುಕ್ತಾಯ ಕಾಣಲಿದೆ.

ಆದರೆ ನಾಯಕ ನಟ ವೇದಾಂತ್ ಅಲಿಯಾಸ್ ರಕ್ಷ್ ಕಳೆದ ಒಂದು ತಿಂಗಳಿನಿಂದ ಧಾರವಾಹಿಯಲ್ಲಿಲ್ಲ. ತಮ್ಮದೇ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವುದರಿಂದ ರಕ್ಷ್ ಇಲ್ಲದೇ ಧಾರವಾಹಿ ಮುಂದುವರಿಸಿಕೊಂಡು ಹೋಗಲಾಗುತ್ತಿದೆ.

ಈ ಬಗ್ಗೆ ಅಭಿಮಾನಿಗಳೂ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯಾಕೆಂದರೆ ರಕ್ಷ್ ಗೆ ಸಾಕಷ್ಟು ಅಭಿಮಾನಿಗಳಿದ್ದು, ಗಟ್ಟಿಮೇಳ ನೋಡುವುದೇ ಅವರಿಗೋಸ್ಕರ ಎನ್ನುವವರಿದ್ದಾರೆ. ಆದರೆ ಈಗ ನಾಯಕನೇ ಇಲ್ಲದ ಧಾರವಾಹಿ ನೋಡಲು ಬೋರ್ ಎನ್ನುವುದು ವೀಕ್ಷಕರ ಅಭಿಪ್ರಾಯ.

ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಕೊನೆಗೂ ರಕ್ಷ್ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಒಂದನ್ನು ಬರೆದುಕೊಂಡಿದ್ದಾರೆ. ವೇದಾಂತ್ ಕೊನೆಯಲ್ಲಾದರೂ ಬರುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

‘ನಿಮ್ಮ ಪ್ರೀತಿ ಅಭಿಮಾನ ಎಲ್ಲವೂ ನನಗೆ ಅರ್ಥವಾಗುತ್ತದೆ. ಆದರೆ ಗಟ್ಟಿಮೇಳ ಒಂದೇ ನನಗೆ ಜೀವನವಲ್ಲ. ಸದ್ಯಕ್ಕೆ ನನ್ನ ಕನಸಿನ ಸಿನಿಮಾ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿದ್ದೇನೆ. ಇದಕ್ಕಾಗಿ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಧಾರವಾಹಿ ಕಡೆಗೆ ಸಮಯ ಕೊಡಲು ಆಗುತ್ತಿಲ್ಲ. ನಿಮ್ಮ ಹೀರೋ ಎರಡು ಧಾರವಾಹಿಗೇ ಸೀಮಿತವಾಗಬೇಕೆಂದು ನೀವು ಬಯಸುತ್ತೀರಾ? ಸ್ವಲ್ಪ ಸಮಯ ಕೊಡಿ. ನಿಮಗೆ ಯಾರಿಗೂ ನಿರಾಸೆ ಮಾಡಲ್ಲ.

ಸದ್ಯಕ್ಕೆ ಗಟ್ಟಿಮೇಳ ಕೊನೆಯ ಹಂತದಲ್ಲಿದೆ. ಇನ್ನೊಂದು ಹೊಸ ಧಾರವಾಹಿ ತೆರೆಗೆ ಬರಲು ತಯಾರಾಗದೇ ಇರುವುದರಿಂದ ಗಟ್ಟಿಮೇಳ ಮುಂದುವರಿಯುತ್ತಿದೆ ಅಷ್ಟೇ. ನಿಮ್ಮೆಲ್ಲರ ಪ್ರೀತಿಗೆ ನಾನು ಅಭಾರಿ. ಅದಕ್ಕೆ ದೊಡ್ಡದಾಗಿ ಏನೋ ಉಡುಗೊರೆ ಕೊಡಲು ತಯಾರಿ ಮಾಡುತ್ತಿದ್ದೇನೆ. ಕೆಲವು ಸಮಯಗಳಿಂದ ನಾನು ತೆರೆ ಮೇಲೆ ಬಂದಿಲ್ಲ ಎಂದು ನಿಮಗೆ ಬೇಸರವಿರಬಹುದು. ಖಂಡಿತಾ ನಾನು ನಿಮಗೆ ನಿರಾಸೆ ಮಾಡಲ್ಲ. ಗಟ್ಟಿಮೇಳ ಕೊನೆಯಲ್ಲಿ ಖಂಡಿತಾ ಒಂದು ಸೆಲೆಬ್ರೇಷನ್ ಇರುತ್ತದೆ. ಇದನ್ನು ನಾವೆಲ್ಲಾ ಜೊತೆಯಾಗಿ ಸಂಭ್ರಮಿಸೋಣ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ