ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

Sampriya

ಮಂಗಳವಾರ, 21 ಅಕ್ಟೋಬರ್ 2025 (22:15 IST)
ಬೆಂಗಳೂರು: ರಿಷಭ್‌ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿದ ಕಾಂತಾರ ಚಾಪ್ಟರ್‌ 1ರ ಕಲೆಕ್ಷನ್‌ ಏರುತ್ತಲೇ ಇದೆ. ದೀಪಾವಳಿ ಬಂದಿದ್ದರಿಂದ ಮತ್ತೆ ಥಿಯೇಟರ್‌ನತ್ತ ಜನರನ್ನು ಈ ಸಿನಿಮಾ ಆಕರ್ಷಿಸುತ್ತಿದೆ. 

ಕರ್ನಾಟಕದಲ್ಲಿ ಕಲೆಕ್ಷನ್‌ ವಿಚಾರದಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆದಿದೆ. ಕರ್ನಾಟಕದಲ್ಲಿ ₹ 200 ಕೋಟಿ ಗಳಿಸಿದ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆಗೆ ʼಕಾಂತಾರ ಚಾಪ್ಟರ್‌ 1' ಪಾತ್ರವಾಗಿದೆ. ಹಿಂದಿ ಆವೃತ್ತಿಯ ಕಲೆಕ್ಷನ್‌ ₹ 175 ಕೋಟಿ ದಾಟಿದೆ. ಇನ್ನು ತೆಲುಗು ರಾಜ್ಯಗಳಲ್ಲೂ ₹ 100 ಕೋಟಿ ಗಳಿಸಿದೆ. 

ವಿಶೇಷ ಎಂದರೆ ಕೇರಳದಲ್ಲಿ ₹ 50 ಕೋಟಿಗೂ ಹೆಚ್ಚು ಬಾಚಿಕೊಂಡಿದೆ. ಮಲಯಾಳಂ ಆವೃತ್ತಿಯಿಂದ ₹ 55 ಕೋಟಿ ಹರಿದುಬಂದಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ಅಧಿಕೃತವಾಗಿ ಪ್ರಕಟಿಸಿದೆ. ಇನ್ನು ತಮಿಳಿನಲ್ಲಿ₹  62 ಕೋಟಿ ಕಲೆಕ್ಷನ್‌ ಆಗಿದೆ.

ದೀಪಾವಳಿಯ ವೇಳೆ ಕಾಂತಾರ ಕಾವು ಮತ್ತೆ ಹೆಚ್ಚಾಗಿದ್ದು, ರಿಲೀಸ್‌ ಆದ ಎಲ್ಲ ಭಾಷೆಗಳಲ್ಲಿಯೂ ಕಮಾಲ್‌ ಮಾಡುತ್ತಿದೆ. ಹೀಗೆ ಸಾಗಿದರೆ 1 ಸಾವಿರ ಕೋಟಿ ರೂ. ಕ್ಲಬ್‌ ಸೇರುವ ಸಾಧ್ಯತೆ ಇದೆ. ಅಕ್ಟೋಬರ್‌ 2ರಂದು ಅದ್ಧೂರಿಯಾಗಿ ತೆರೆಗೆ ಬಂದ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ʼಕಾಂತಾರ ಚಾಪ್ಟರ್‌ 1' 20 ದಿನಗಳ ಓಟ ಮುಗಿಸಿದ್ದು, ನಿರೀಕ್ಷೆಯಂತೆಯೇ ದಾಖಲೆಯ ಕಲೆಕ್ಷನ್‌ ಮಾಡಿದೆ.  

ಅಕ್ಟೋಬರ್‌ 20ರಂದು ಚಿತ್ರ ತೆರೆಕಂಡ 19 ದಿನ ಆಗಿದ್ದು, ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಕಲೆಕ್ಷನ್‌ ₹ 750 ಕೋಟಿ ದಾಟಿದೆ. ಇನ್ನು ಭಾರತವೊಂದರಲ್ಲೇ ₹ 535 ಕೋಟಿ ರೂ. ಗಳಿಸಿದ್ದು, ಕರ್ನಾಟಕದಲ್ಲಿ 200 ಕೋಟಿ ರೂ. ಕ್ಲಬ್‌ ಸೇರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ