ಕಥಾ ಸಂಗಮ ಪ್ರೇಕ್ಷಕರ ಮನಸು ಕದಿಯೋ ಸಂಭವ!

ಮಂಗಳವಾರ, 3 ಡಿಸೆಂಬರ್ 2019 (13:06 IST)
ಯಾವುದೇ ಚಿತ್ರಗಳ ಪಾಲಿಗಾದರೂ ಟೀಸರ್, ಟ್ರೇಲರ್ ಮತ್ತು ಹಾಡುಗಳು ಆಮಂತ್ರಣವಿದ್ದಂತೆ. ಅದಕ್ಕೆ ಪ್ರೇಕ್ಷಕರು ಆರಂಭಿಕವಾಗಿಯೇ ಮನ ಸೋತರೆಂದರೆ ಗೆಲುವು ಗ್ಯಾರೆಂಟಿ ಎಂದೇ ಅರ್ಥ. ಆದರೆ ಅದೊಂದು ಕುಸುರಿ ಕೆಲಸ. ಅದು ಪ್ರತಿಭಾವಂತ ನಟ, ನಿರ್ದೇಶಕ ರಿಷಬ್ ಶೆಟ್ಟರಿಗೆ ಆರಂಭದಿಂದಲೂ ಸಿದ್ಧಿಸಿದೆ.

ಈ ಕಾರಣದಿಂದಲೇ ಅವರು ಯಾವ ಚಿತ್ರ ಮಾಡಿದರೂ ಅದರಲ್ಲೊಂದು ಹೊಸತನ, ಪ್ರಯೋಗ ಇದ್ದೇ ಇರುತ್ತದೆಂಬ ನಂಬಿಕೆ ಪ್ರೇಕ್ಷಕರಲ್ಲಿಯೂ ನೆಲೆಗೊಂಡಿದೆ. ಕಥಾ ಸಂಗಮದ ಟ್ರೇಲರ್ ಅನ್ನೂ ಕೂಡಾ ಅವರು ಆ ನಂಬಿಕೆ ಮತ್ತಷ್ಟು ಪ್ರಜ್ವಲಿಸುವಂತೆಯೇ ರೂಪಿಸಿದ್ದಾರೆ. ಅದಕ್ಕೆ ಸಿಕ್ಕಿರುವ ಪ್ರತಿಕ್ರಿಯೆಗಳೇ ಕಥಾ ಸಂಗಮ ಚಿತ್ರ ಪ್ರೇಕ್ಷಕರ ಮನಸು ಕದಿಯುವ ಸಂಭವವನ್ನು ಮತ್ತಷ್ಟು ನಿಚ್ಚಳವಾಗಿಸಿದೆ.
ಈ ಟ್ರೇಲರ್ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಇದರಲ್ಲಿ ಏಳು ಕಥೆಗಳ ಝಲಕ್ಕುಗಳನ್ನು ಜಾಹೀರು ಮಾಡುತ್ತಲೇ ಪಾತ್ರಗಳ ಪರಿಚಯವನ್ನೂ ಮಾಡಿಸಲಾಗಿದೆ. ಅದರಲ್ಲಿ ಪ್ರತಿಯೊಬ್ಬರನ್ನೂ ಸೆಳೆದುಕೊಳ್ಳುವಂಥಾ ತಾಜಾ ಸನ್ನಿವೇಶಗಳು, ಸಮ್ಮೋಹಕ ಕಥೆಗಳ ಮುನ್ಸೂಚನೆಗಳೆಲ್ಲ ಕಾಣಿಸಿದ್ದರಿಂದಲೇ ಲಕ್ಷ ಲಕ್ಷ ವೀಕ್ಷಣೆಯೊಂದಿಗೆ ಟ್ರೆಂಡಿಂಗ್ನಲ್ಲಿದೆ. ಶ್ರೀದೇವಿ ಎಂಟರ್ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮ ಅಪರೂಪದ ಕಥೆಗಳ ಮಹಾ ಸಂಗಮವಾಗಿದೆ ಎಂಬ ಸ್ಪಷ್ಟ ಸೂಚನೆಯನ್ನು ಪ್ರತೀ ಪ್ರೇಕ್ಷಕರಿಗೂ ಮನವರಿಕೆ ಮಾಡಿ ಕೊಡುವಲ್ಲಿ ಈ ಟ್ರೇಲರ್ ಗೆದ್ದಿದೆ.
ಈ ಚಿತ್ರ ಡಿಸೆಂಬರ್ 6ರಂದು ಬಿಡುಗಡೆಗೊಳ್ಳಲಿದೆ. ಇದೀಗ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೆಟ್ ಪಡೆದುಕೊಂಡಿರುವ ಕಥಾ ಸಂಗಮ ಏಳು ಕಥೆಗಳನ್ನೊಳಗೊಂಡಿದೆ. ಒಂದೇ ಸಿನಿಮಾದೊಳಗೆ ಏಳು ಸಿನಿಮಾ ನೋಡೋ ಅಚ್ಚರಿದಾಯಕ ಅವಕಾಶವನ್ನು ಈ ಚಿತ್ರ ಕೊಡಮಾಡಿದೆ. ಸಸ್ಪೆನ್ಸ್ ಥ್ರಿಲ್ಲರ್, ಕ್ರೈಂ ಛಾಯೆಯ ಕಥೆಗಳನ್ನೊಳಗೊಂಡಿರೋ ಈ ಚಿತ್ರದಲ್ಲಿ ಚಿತ್ರ ವಿಚಿತ್ರ ಗುಣ ಲಕ್ಷಣಗಳ ಪಾತ್ರಗಳಿದ್ದಾವೆ. ಅದೆಲ್ಲವೂ ಟ್ರೇಲರ್ ಮೂಲಕವೇ ಅನಾವರಣಗೊಂಡಿದೆ. ಇಡೀ ಸಿನಿಮಾದ ಸಾರವನ್ನು ಹಿಡಿದಿಟ್ಟುಕೊಂಡಂಥಾ ಹಾಡೊಂದು ಈಗಾಗಲೇ ಟ್ರೆಂಡಿಂಗ್ನಲ್ಲಿದೆ. ಈ ಹಾಡು ಮತ್ತು ಟ್ರೇಲರ್ಗೆ ಸಿಗುತ್ತಿರೋ ಅಭೂತಪೂರ್ವ ಬೆಂಬಲವೇ ಕಥಾ ಸಂಗಮ ಕಮಾಲ್ ಮಾಡಲಿರೋದನ್ನು ಸ್ಪಷ್ಟಪಡಿಸುವಂತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ