ಕಥಾ ಸಂಗಮ: ರಿಷಬ್ ಶೆಟ್ಟಿ ಹೊಳೆಯಿಸಿದ ಏಳು ಮುತ್ತುಗಳು!

ಸೋಮವಾರ, 2 ಡಿಸೆಂಬರ್ 2019 (17:11 IST)
ಎಪ್ಪತ್ತರ ದಶಕದಲ್ಲಿ ತೆರೆ ಕಂಡಿದ್ದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಥಾ ಸಂಗಮ ಕನ್ನಡ ಚಿತ್ರರಂಗದ ಹೆಮ್ಮೆಯಾಗಿ ಸದಾ ಪ್ರೇಕ್ಷಕರ ಮನಸಲ್ಲುಳಿದಿರುವ ಚಿತ್ರ. ಇದೀಗ ಅದೇ ಹೆಸರಿನಲ್ಲಿ, ಕಣಗಾಲರ ಸ್ಫೂರ್ತಿಯಿಂದಲೇ ರಿಷಬ್ ಶೆಟ್ಟಿ ಮತ್ತೊಂದು ಕಥಾ ಸಂಗಮವನ್ನು ಸಾಕಾರಗೊಳಿಸಿದ್ದಾರೆ.

ಈ ಮೂಲಕ ಆಧುನಿಕ ಕನ್ನಡ ಚಿತ್ರರಂಗದಲ್ಲೊಂದು ಮೈಲಿಗಲ್ಲು ನಿರ್ಮಿಸಿ ಕನ್ನಡ ಚಿತ್ರರಂಗದ ಘನತೆ, ಗೌರವಗಳನ್ನು ಮತ್ತಷ್ಟು ಮಿರುಗಿಸುವ ಕಾರ್ಯವನ್ನೂ ಮಾಡಿ ಮುಗಿಸಿದ್ದಾರೆ. ಕಣಗಾಲರ ಸ್ಫೂರ್ತಿಯಿಂದ ರೂಪುಗೊಂಡಿರೋ ಈ ಚಿತ್ರವನ್ನು ಅವರಿಗೇ ಅರ್ಪಿಸುವ ಮೂಲಕ ಗೌರವವನ್ನು ಸಮರ್ಪಿಸಿದ್ದಾರೆ. ಇದೆಲ್ಲಕ್ಕಿಂತಲೂ ವಿಶೇಷವೆಂದರೆ ರಿಷಬ್ ಈ ಸಿನಿಮಾ ಮೂಲಕ ಏಳು ಮುತ್ತುಗಳನ್ನು ಪ್ರೇಕ್ಷಕರ ಮುಂದೆ ಹೊಳೆಯುವಂತೆ ಮಾಡಿದ್ದಾರೆ.
ಶ್ರೀದೇವಿ ಎಂಟರ್ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮದ ಮೂಲಕ ಕಥಾ ಸಂಗಮದ ಮೂಲಕ ಕಿರಣ್ ರಾಜ್ ಕೆ, ಶಶಿಕುಮಾರ್ ಪಿ, ಚಂದ್ರಜಿತ್ ಎಲಿಯಪ್ಪ, ರಾಹುಲ್ ಪಿ.ಕೆ, ಜೈ ಶಂಕರ್, ಕರಣ್ ಅನಂತ್, ಜಮದಗ್ನಿ ಮನೋಜ್ ಎಂಬ ಏಳು ಮಂದಿ ಪ್ರತಿಭಾವಂತ ನಿರ್ದೇಶಕರುಗಳ ಆಗಮನವಾಗಿದೆ. ಈ ಏಳು ಮಂದಿಯೂ ಕನ್ನಡ ಚಿತ್ರರಂಗಕ್ಕೆ ಹೊಸಾ ದಿಕ್ಕು ತೋರ ಬಲ್ಲಂಥಾ ಪ್ರತಿಭೆ ಇರುವ ಯುವ ನಿರ್ದೇಶಕರು. ಕಥಾ ಸಂಗಮದ ಗುಂಗೀಹುಳ ಮನಸು ಕೊರೆಯಲು ಆರಂಭಿಸಿದ್ದ ಕ್ಷಣಗಳಿಂದಲೇ ಈ ಏಳು ನಿರ್ದೇಶಕರಿಗಾಗಿ ರಿಷಬ್ ಹೋದಲ್ಲಿ ಬಂದಲ್ಲಿ ಹುಡುಕಲಾರಂಭಿಸಿದ್ದರಂತೆ. ಕಡೆಗೂ ಅವರೆಲ್ಲ ಸಿಕ್ಕಿದ್ದಾರೆ. ಭಿನ್ನವಾದ ಕಥೆಗಳ ಮೂಲಕ ಪ್ರೇಕ್ಷಕರೆದುರು ಬಂದು ನಿಲ್ಲುತ್ತಿದ್ದಾರೆ.
ಈ ಏಳು ಮಂದಿ ರಿಷಬ್ರ ಕಣ್ಣಿಗೆ ಬಿದ್ದು ಕಥಾ ಸಂಗಮದ ಭಾಗವಾಗಿದ್ದರ ಬಗ್ಗೆಯೇ ಒಂದೊಂದು ರೋಚಕ ಕಥೆಗಳಿವೆ. ಹೋದಲ್ಲಿ ಬಂದಲ್ಲಿ ರಿಷಬ್ ಅವರು ಹುಡುಕಾಟ ನಡೆಸಿದ್ದರ ಫಲವಾಗಿಯೇ ಈ ಏಳು ಮುತ್ತುಗಳು ಹೊಳೆಯಲು ಅಣಿಗೊಂಡಿವೆ. ತಾನು ಬೆಳೆಯೋದರ ಜೊತೆಗೆ ಇತರರನ್ನೂ ಬೆಳೆಸಬೇಕೆಂಬ ಮನಸ್ಥಿತಿಯ ರಿಷಬ್ ಹೊಸಾ ಪ್ರತಿಭೆಗಳ ಆಗಮನದಿಂದಲೇ ಚಿತ್ರರಂಗ ಕಳೆಗಟ್ಟಿಕೊಳ್ಳುತ್ತದೆಂಬುದನ್ನು ನಂಬಿದ್ದಾರೆ. ಆದ್ದರಿಂದಲೇ ಏಳು ಮಂದಿ ಪ್ರತಿಭಾವಂತ ನಿರ್ದೇಶಕರುಗಳನ್ನು ಪರಿಚಯಿಸಿದ್ದಾರೆ. ಇವರೆಲ್ಲರೂ ಕಾಡುವಂಥಾ ಒಂದೊಂದು ಕಥೆಯನ್ನು ಚಿತ್ರವಾಗಿಸಿದ್ದಾರೆ. ಅಂಥಾ ಏಳು ಕಥೆಗಳ ಗುಚ್ಛ ಡಿಸೆಂಬರ್ 6ರಂದು ನಿಮ್ಮೆಲ್ಲರೆದುರು ಬಿಚ್ಚಿಕೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ