ಮುಂಬೈ: ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಶೋನ ಎಪಿಸೋಡ್ ನಲ್ಲಿ ಬಾಲಕನೊಬ್ಬ ವರ್ತನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚಗೆ ಕಾರಣವಾಗಿದೆ. ಈತನ ವಿಡಿಯೋ ಈಗ ವೈರಲ್ ಆಗಿದೆ.
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೆಬಿಸಿ ಶೋನಲ್ಲಿ ಒಮ್ಮೆ ಅವಕಾಶ ಸಿಕ್ಕರೆ ಸಾಕು ಎಂದು ಎಷ್ಟೋ ಜನ ಅಂದುಕೊಳ್ಳುತ್ತಾರೆ. ಅಂತಹದ್ದರಲ್ಲಿ ಈ ಬಾಲಕನಿಗೆ ಅವಕಾಶ ಸಿಕ್ಕಿಯೂ ದುರಹಂಕಾರದಿಂದ ವರ್ತಿಸಿದ್ದಾನೆ. ಆತನ ವರ್ತನೆ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇಶಿತ್ ಭಟ್ ಎಂಬ ಬಾಲಕ ಹಾಟ್ ಸೀಟ್ ನಲ್ಲಿ ಕೂತಿದ್ದ. ಈತ ಕೇವಲ 10 ವರ್ಷದ ಪುಟ್ಟ ಬಾಲಕ. ಆದರೆ ಆತನ ದುರಹಂಕಾರ ಮಾತ್ರ ಮೇರೆ ಮೀರಿತ್ತು. ಸಾಮಾನ್ಯವಾಗಿ ಎಲ್ಲಾ ಸ್ಪರ್ಧಿಗಳಿಗೂ ಹಾಟ್ ಸೀಟ್ ಗೆ ಬಂದಾಗ ನಿಯಮಗಳನ್ನು ವಿವರಿಸಲಾಗುತ್ತದೆ. ಆದರೆ ಈ ಬಾಲಕ ನನಗೆ ನಿಯಮ ಎಲ್ಲಾ ಏನೂ ಹೇಳಬೇಡಿ, ಎಲ್ಲಾ ಗೊತ್ತು. ಮೊದಲು ಪ್ರಶ್ನೆ ಕೇಳಿ ಎಂದು ಅಮಿತಾಭ್ ಗೇ ಕೇಳಿದ್ದಾರೆ.
ಅಮಿತಾಭ್ ಬಚ್ಚನ್ ಪ್ರಶ್ನೆ ಕೇಳುವಾಗ ಆಯ್ಕೆಗಳು ಬರುವ ಮೊದಲೇ ಮೊದಲ ಪ್ರಶ್ನೆಗೆ ನನಗೆ ಉತ್ತರ ಗೊತ್ತು, ಆಯ್ಕೆ ಏನೂ ಬೇಡ ಎಂದು ಉದ್ಧಟತನದಿಂದ ಹೇಳಿದ್ದಾನೆ. ವಿಚಿತ್ರವೆಂದರೆ ಆತ ಬಿಗ್ ಬಿಗೆ ಸ್ವಲ್ಪವೂ ಗೌರವವಿಲ್ಲದೇ ಹೀಗೆ ಮಾತನಾಡುವಾಗ ಗ್ಯಾಲರಿಯಲ್ಲಿದ್ದ ಆತನ ಪೋಷಕರು ನಗು ನಗುತ್ತಾ ಕೂತಿದ್ದರು. ಆದರೆ ಕೊನೆಗೆ ರಾಮಾಯಣದಲ್ಲಿ ಮೊದಲ ಕಾಂಡ ಯಾವುದು ಎಂಬ ಪ್ರಶ್ನೆ ಕೇಳಿದಾಗ ಉದ್ಘಟತನದಿಂದ ಅಯೋಧ್ಯಾ ಕಾಂಡ ಎಂದು ಹೇಳಿ ಒಂದೇ ಒಂದು ರೂಪಾಯಿಯೂ ಗೆಲ್ಲದೇ ಹೊರಬಿದ್ದಿದ್ದಾನೆ.
ಇದೀಗ ಈ ಬಾಲಕನ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಈತ ಇನ್ನೂ ಬಾಲಕ ಆತನ ಪೋಷಕರು ಆತನ ನಡತೆಯನ್ನು ಈಗಲೇ ತಿದ್ದದೇ ಇದ್ದರೆ ಈತ ಯಾವ ರೀತಿ ಬೆಳೆಯಬಹುದು ಎಂದು ಪ್ರಶ್ನೆ ಮಾಡಿದ್ದಾರೆ. ಹಿರಿಯರಿಗೆ ಗೌರವ ಕೊಡುವುದನ್ನು ಪೋಷಕರು ಕಲಿಸಬೇಕು ಎಂದಿದ್ದಾರೆ.