ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಅಭಿನಯಿಸಿರುವ ಜುಮ್ಮಾ ಜುಮ್ಮ ಹಾಡಿಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಟೀಕೆ ಮಾಡಿದ್ದಾರೆ.
ದುರ್ಯೋಧನ ಮಹಾಭಾರತದಲ್ಲಿ ಬರುವ ಖಳ ಪಾತ್ರ. ಆದರೆ ದುರ್ಯೋಧನನ್ನು ಬೇರೆಯದೇ ಕೋನದಲ್ಲಿ ತೋರಿಸುವ ಪ್ರಯತ್ನ ಕುರುಕ್ಷೇತ್ರ ಸಿನಿಮಾದಲ್ಲಿ ಮಾಡಲಾಗಿದೆ. ಅದೇನೋ ಸರಿ. ಆದರೆ ಈ ಸಿನಿಮಾದಲ್ಲಿ ದುರ್ಯೋಧನ ಪಾತ್ರಧಾರಿ ದರ್ಶನ್ ಇಬ್ಬರು ನಾಯಕಿಯರೊಂದಿಗೆ ರೊಮ್ಯಾಂಟಿಕ್ ಹಾಡುಗಳಿಗೆ ಹೆಜ್ಜೆ ಹಾಕಿದ್ದು, ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.
ಮಹಾಭಾರತದ ಕತೆಯಲ್ಲಿ ಈ ರೀತಿ ಜುಮ್ಮಾ ಜುಮ್ಮ ಎಂಬ ಸಾಲಿನ ಮತ್ತಿನ ಹಾಡು ಸೇರಿಸಿದ್ದಕ್ಕೆ ಟೀಕೆ ಮಾಡುತ್ತಿದ್ದಾರೆ. ದುರ್ಯೋಧನ ಈ ರೀತಿ ಕುಣಿದಿದ್ದು ಯಾವಾಗ? ಈ ಹಾಡುಗಳನ್ನು ನೋಡಿದರೆ ಸಿನಿಮಾದಲ್ಲಿ ಇನ್ನು ಯಾವೆಲ್ಲಾ ಕಟ್ಟು ಕತೆಗಳನ್ನು ಸೇರಿಸಿದ್ದಾರೋ ಎಂದೆಲ್ಲಾ ಕೆಲವರು ಕಾಮೆಂಟ್ ಮಾಡುತ್ತಿದ್ದರೆ ಮತ್ತೆ ಕೆಲವರು ಇಡೀ ವಿಶ್ವದ ಗಮನ ಸೆಳೆಯಬಹುದಾಗಿದ್ದ ಕತೆ ಹೊಂದಿದ್ದ ಕುರುಕ್ಷೇತ್ರ ಸಿನಿಮಾ ಯಾಕೋ ಇದನ್ನೆಲ್ಲಾ ನೋಡಿದರೆ ಟುಸ್ ಪಟಾಕಿ ಎನಿಸುತ್ತದೆ ಎಂದು ಕಾಮೆಂಟ್ ಮಾಡಿದವರೂ ಇದ್ದಾರೆ.
ಅದೇನೇ ಇದ್ದರೂ ಈ ಹಾಡೂ ಕೂಡಾ ಅದರ ಮಾಧುರ್ಯಕ್ಕೆ ಜನರಿಗೆ ಇಷ್ಟವಾಗಿದೆ. ಕನ್ನಡದ ಮೊದಲ 3 ಡಿ ಪೌರಾಣಿಕ ಚಿತ್ರ ಎಂಬ ಹೆಗ್ಗಳಿಕೆಯೊಂದಿಗೆ ಕುರುಕ್ಷೇತ್ರ ಆಗಸ್ಟ್ 9 ರಂದು ತೆರೆ ಕಾಣುತ್ತಿದೆ.