ದರ್ಶನ್ ತೂಗುದೀಪ ಮನೆಗೆ ಎದುರಾಗುತ್ತಾ ಅಪಾಯ?

ಶುಕ್ರವಾರ, 19 ಆಗಸ್ಟ್ 2016 (12:43 IST)
ಬೆಂಗಳೂರಿನಲ್ಲಿ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕಳೆದ ಕೆಲವು ದಿನಗಳಿಂದ ಭರದಿಂದ ಸಾಗುತ್ತಿದೆ. ರಾಜಾ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಅದರಲ್ಲಿ ಹತ್ತಾರು ಅಂತಸ್ತಿನ ಮನೆ ಕಟ್ಟಿಕೊಂಡ ಅನೇಕರು ಇದೀಗ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ನಿರಂತರವಾಗಿ ಸಾಗುತ್ತಿರುವ ಒತ್ತೆವಪಿ ತೆರವು ಕಾರ್ಯಾಚರಣೆಯಿಂದಾಗಿ ಒತ್ತುವರಿದಾರರ ಎದೆಯಲ್ಲಿ ನಡುಕ ಶುರುವಾಗಿದೆ.
 
ಇನ್ನು ಈ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯ ಬಿಸಿ ನಟ ದರ್ಶನ್ ಅವರ ನಿವಾಸಕ್ಕೂ ತಟ್ಟಲಿದೆಯಂತೆ. ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ತೂಗುದೀಪ ನಿಲಯವನ್ನು ರಾಜಾ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದೆಯಂತೆ. ಇನ್ನು ರಾಜರಾಜೇಶ್ವರಿ ನಗರದಲ್ಲಿ ಐಡಿಯಲ್ ಹೋಂ ಟೌನ್ ಶಿಪ್ ನಿಂದ ನಿರ್ಮಾಣವಾಗಿರುವ ಲೇ ಔಟ್ ನಲ್ಲಿ ನಟ ದರ್ಶನ್ ಅವರು, ಎಫ್ ರೋಡ್ ನಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಿದ್ದಾರೆ. ಕಂದಾಯ ಇಲಾಖೆಯ ಸೂಪರ್ ಇಂಪೋಸ್ ಮ್ಯಾಪ್‌ನಲ್ಲಿ ಈ ನಿವೇಶನ, ರಂಗೋಲಿ ಹಳ್ಳದ ವ್ಯಾಪ್ತಿಯಲ್ಲಿ ಬರುತ್ತದೆ ಎನ್ನಲಾಗಿದೆ. ಹೀಗಾಗಿ ದರ್ಶನ್ ಅವರ ಮನೆಗೂ ಒತ್ತುವರಿ ತೆರವು ಬಿಸಿ ತಟ್ಟಲಿದೆಯಾ ಎಂಬ ಪ್ರಶ್ನೆ ಎದುರಾಗಿದೆ.
 
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜರಾಜೇಶ್ವರಿ ನಗರದ ಜಂಟಿ ಆಯುಕ್ತರಾದ ವೀರಭದ್ರಪ್ಪ ರಾಜಕಾಲುವೆ ಒತ್ತುವರಿ ಸರ್ವೆಯಲ್ಲಿ ನಟ ದರ್ಶನ್ ಅವರ ಮನೆ ರಾಜಕಾಲುವೆ ಜಾಗದಲ್ಲಿ ನಿರ್ಮಾಣವಾಗಿದೆ ಅನ್ನೋದು ಗೊತ್ತಾದರೆ ಅವರ ಮನೆಯನ್ನು ಒಡೆಯೋದಕ್ಕೂ ಹಿಂಜರಿಯೋದಿಲ್ಲ. ಈಗಾಗಲೇ ಭೂ ಮಾಪಕರಿಗೆ ಈ ಬಗ್ಗೆ ಪರಿಶೀಲನೆ ನಡೆಸೋದಕ್ಕೆ ಸೂಚಿಸಿದ್ದೇನೆ ಅಂತಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ