ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ಇಂದು 63 ನೇ ಜನ್ಮದಿನದ ಸಂಭ್ರಮ. ಬಹುಭಾಷೆಗಳಲ್ಲಿ ಮಿಂಚಿದ ಕಂಪ್ಲೀಟ್ ಸ್ಟಾರ್ ಎಂಬ ಬಿರುದಾಂಕಿತರಾಗಿರುವ ಮೋಹನ್ ಲಾಲ್ ಕುರಿತ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.
1978 ರಲ್ಲಿ ಮೋಹನ್ ಲಾಲ್ ಮೊದಲ ಬಾರಿಗೆ ಮಲಯಾಳಂ ಸಿನಿಮಾ ತಿರುನೋಟ್ಟಂ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆಗ ಅವರಿಗೆ ಕೇವಲ 18 ವರ್ಷ ವಯಸ್ಸು. ಆದರೆ ಈ ಸಿನಿಮಾ ತಡವಾಗಿ ರಿಲೀಸ್ ಆಯಿತು. ಇದಕ್ಕೆ ಮೊದಲು 1980 ರಲ್ಲಿ ಮಂಝಿಲ್ ವಿರಿಙ ಪೂವ್ ಎಂಬ ಸಿನಿಮಾ ಮೊದಲು ರಿಲೀಸ್ ಆಗಿತ್ತು. ಇದುವರೆಗೆ ಸುಮಾರು 325 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇವಲ ಮಲಯಾಳಂ ಮಾತ್ರವಲ್ಲದೆ, ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲೂ ವಿಶೇಷ ಪಾತ್ರಗಳನ್ನು ಮಾಡಿದ್ದಾರೆ.
ನಟನಾಗಿ ಮೋಹನ್ ಲಾಲ್ ರನ್ನು ಎಲ್ಲರಿಗೂ ಗೊತ್ತು. ನಟನೆ ಹೊರತಾಗಿ ಅವರು ಉತ್ತಮ ಗಾಯಕರೂ ಕೂಡಾ. ತಮ್ಮದೇ ಸಿನಿಮಾಗೆ ಹಾಡಿದ ಕಲಾವಿದ. ಸಿನಿಮಾವಲ್ಲದೆ, ಅಪ್ಪಟ ಕೃಷಿಕ ಜೊತೆಗೆ ಸೇನೆಯ ವಿಶೇಷ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಲ್ಲಿದ್ದಾರೆ.
ತಮ್ಮ ಮನೆಯ ಪರಿಸರದಲ್ಲೇ ತಮಗೆ ಬೇಕಾದ ತರಕಾರಿ ಬೆಳೆಯುತ್ತಾರೆ. ಬಿಡುವಿದ್ದಾಗಲೆಲ್ಲಾ ಇದರ ನಡುವೆ ಕಾಲ ಕಳೆಯುತ್ತಾರೆ. ಅಲ್ಲದೆ ಸಮಾಜ ಸೇವೆಯಲ್ಲೂ ಅವರಿಗೆ ಅಪಾರ ಆಸಕ್ತಿ. ಸರ್ಕಾರದ ವಿವಿಧ ಯೋಜನೆಗಳಿಗೆ ರಾಯಭಾರಿಯಾಗಿದ್ದಾರೆ. ಕ್ರಿಕೆಟ್ ಮತ್ತು ಫುಟ್ಬಾಲ್ ಎಂದರೆ ಮೆಚ್ಚಿನ ಕ್ರೀಡೆ. ಈ ಹಿಂದೆ ಐಪಿಎಲ್ ನಲ್ಲಿ ಕೊಚ್ಚಿ ತಂಡಕ್ಕಾಗಿ ಬಿಡ್ ಮಾಡಲೂ ಯತ್ನಿಸಿದ್ದರು. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಆಡಿದ್ದಾರೆ.
ಇನ್ನೂ ಇಂಟ್ರೆಸ್ಟಿಂಗ್ ಸಂಗತಿಯೆಂದರೆ ಮೋಹನ್ ಲಾಲ್ ಮ್ಯಾಜಿಷಿಯನ್ ಗೋಪಿನಾಥ್ ಮುತುಕೂಡ್ ಬಳಿ 18 ತಿಂಗಳ ಕಾಲ ಎಸ್ಕೇಪ್ ಆರ್ಟ್ ವಿದ್ಯೆಯನ್ನೂ ಕಲಿತಿದ್ದರು. ಬಳಿಕ ಇದರಲ್ಲಿ ರಿಸ್ಕ್ ಇದೆ ಎಂಬ ಕಾರಣಕ್ಕೆ ಅಭಿಮಾನಿಗಳ, ಹಿತೈಷಿಗಳ ಒತ್ತಾಯಕ್ಕೆ ಮಣಿದು ಶೋ ಮಾಡುವುದನ್ನು ಕೈ ಬಿಟ್ಟರು.
ಸಿನಿಮಾ ಲೋಕದ ವೈವಿದ್ಯಮಯ ನಟರಲ್ಲಿ ಒಬ್ಬರಾಗಿರುವ ಮೋಹನ್ ಲಾಲ್ ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ಇಂದು ಕೇವಲ ನಟನಾಗಿ ಮಾತ್ರವಲ್ಲ, ನಿರ್ಮಾಪಕನಾಗಿ, ವಿತರಕನಾಗಿಯೂ ಗುರುತಿಸಿಕೊಂಡಿದ್ದಾರೆ. ಈ ಕಂಪ್ಲೀಟ್ ಆಕ್ಟರ್ ಗೆ ಇಂದು ಜನ್ಮದಿನದ ಶುಭಾಷಯಗಳು.