ಒನ್ ಲವ್ 2 ಸ್ಟೋರಿ ಹೀರೋಗೆ ಪವರ್ ಸ್ಟಾರ್ ರಿಯಲ್ ಹೀರೋ!

ಸೋಮವಾರ, 12 ಆಗಸ್ಟ್ 2019 (16:54 IST)
ಯಾರೊಳಗೇ ಆದರೂ ಸಿನಿಮಾ ಕನಸೊಂದು ಊಟೆಯೊಡೆಯೋದೇ ಸಿನಿಮಾಗಳ ಮೂಲಕ. ಹಾಗೆ ಸಿನಿಮಾ ನೋಡೋ ಹುಚ್ಚು ಅನೇಕರನ್ನು ಗಾಂಧಿನಗರದ ಹೆಬ್ಬಾಗಿಲಿಗೆ ತಂದು ನಿಲ್ಲಿಸುತ್ತೆ. ಈ ಬಣ್ಣದ ಜಗತ್ತಿನಲ್ಲಿಯೇ ತನ್ನದೊಂದು ಸಾಧನೆಯ ಚಿತ್ತಾರ ಮೂಡಿಸಬೇಕೆಂಬ ಹೆಬ್ಬಯಕೆಯನ್ನೂ ಮೂಡಿಸುತ್ತೆ. ಈ ದಿಸೆಯಲ್ಲಿತೆರೆ ಮೇಲೆ ವಿಜೃಂಭಿಸೋ ಯಾರೋ ಹೀರೋ ಇಂಥಾ ಕನಸುಗಳಿಗೆ ಅಗೋಚರವಾಗಿ ನೀರೆರೆದು ಪೋಷಿಸುತ್ತಾರೆ. ಹಾಗೆ ಚುಗುರೊಡೆದ ಗುರಿಯೊಂದು ಅದೇ ಗಾಂಧಿನಗರದಲ್ಲಿ ರೆಂಬೆ ಕೊಂಬೆ ಮೂಡಿಸಿಕೊಂಡು ಮೆರೆಯುವಂತೆಯೂ ಮಾಡುತ್ತೆ. ಈ ಮಾತಿಗೆ ಇದೇ ಹದಿನಾರನೇ ತಾರೀಕು ಬಿಡುಗಡೆಯಾಗುತ್ತಿರೋ ಒನ್ ಲವ್ 2 ಸ್ಟೋರಿ ಚಿತ್ರದ ನಾಯಕರಲ್ಲೊಬ್ಬರಾದ ಸಂತೋಷ್ ತಾಜಾ ಉದಾಹರಣೆ.
ಈ ಸಿನಿಮಾ ಮೂಲಕವೇ ಚಿತ್ರರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ಕನಸು ಹೊತ್ತಿದ್ದ ಸಂತೋಷ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹೀಗೆ ಸಂತೋಷ್ ನಾಯಕನಾಗಿದ್ದರ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪಾತ್ರವಿದೆ ಎಂದರೆ ಯಾರಿಗಾದರೂ ಅಚ್ಚರಿಯಾಗಬಹುದು. ಆದರೆ ಅದು ಸಿನಿಮಾಗಿರೋ ಶಕ್ತಿ, ನಾಯಕ ನಟರಿರೋ ಪ್ರಭಾವ ಗಳ ಬಗ್ಗೆ ಗೊತ್ತಿರೋ ಮಂದಿಗೆ ಸಹಜವಾಗಿಯೇ ಕಾಣಿಸುತ್ತದೆ.
 
ಸಂತೋಷ್ ಅವರು ಬೆಂಗಳೂರಿನ ಹುಡುಗ. ಶಾಲಾ ಕಾಲೇಜು ದಿನಗಳಲ್ಲಿಯೇ ಸಿನಿಮಾ ಬಗ್ಗೆ ಆಕರ್ಷಣೆಗೆ ಬಿದ್ದವರು. ಆ ನಂತರದ ದಿನಗಳಲ್ಲಿ ಅದನ್ನೇ ಮನಸೊಳಗೆ ಸಾಕಿಕೊಂಡು ಪಕ್ವಗೊಳಿಸಿಕೊಂಡರಾದರೂ ಬದುಕು ಕರೆದೊಯ್ದು ನಿಲ್ಲಿಸಿದ್ದು ಬೇರೆಯದ್ದೇ ದಾರಿಗೆ. ಇಂಜಿನೀರಿಂಗ್ ಮಾಡಿ ಸಾಫ್ಟ್ ವೇರ್ ಇಂಜಿನಿಯರ್ ಆದರೂ ಅವರನ್ನು ಸಿನಿಮಾರಂಗಕ್ಕೆ ಕರೆದು ತಂದು ನಿಲ್ಲಿಸಿದ್ದು ಪವರ್ ಸ್ಟಾರ್ ಪುನೀತ್ ಮೇಲಿನ ಅಭಿಮಾನ. ಅವರನ್ನು ಆರಾಧಿಸುತ್ತಾ, ಅವರ ಸಿನಿಮಾಗಳನ್ನು ನೋಡುತ್ತಾ ಅವರಂತೆಯೇ ಆಗೋ ಕನಸು ಕಂಡ ಸಂತೋಷ್ ಈಗ ಕಡೆಗೂ ಹೀರೋ ಆಗಿ ಆಗಮಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ