ವಸಿಷ್ಟ ಬಂಟನೂರು ನಿರ್ದೇಶನದ ಒನ್ ಲವ್ 2 ಸ್ಟೋರಿ ಇದೇ ತಿಂಗಳು ಹದಿನೈದನೇ ತಾರೀಕಿನಂದು ತೆರೆಕಾಣಲಿದೆ. ಸಿನಿಮಾವೊಂದು ಎಲ್ಲ ಪ್ರಚಾರದ ಪಟ್ಟುಗಳಾಚೆಗೆ ಹೀಗೆ ಟ್ರೈಲರ್, ಪೋಸ್ಟರ್, ಹಾಡುಗಳಿಂದ ಗಮನ ಸೆಳೆಯೋದು, ಪ್ರೇಕ್ಷಕರನ್ನು ಕಾಯುವಂತೆ ಮಾಡೋದೆಲ್ಲ ಗೆಲುವಿನ ಆರಂಭ. ಈ ನಿಟ್ಟಿನಲ್ಲಿ ನೋಡ ಹೋದರೆ ಈ ಚಿತ್ರ ಅಂಥಾದ್ದೊಂದು ಗೆಲುವಿನ ಹಾದಿಯಲ್ಲಿ ಹೆಜ್ಜೆಯಿಟ್ಟಾಗಿದೆ. ಅದೆಷ್ಟೋ ವರ್ಷಗಳ ಕಾಲ ಪ್ರಯತ್ನ ಪಟ್ಟು, ಕುಂತಲ್ಲಿ ನಿಂತಲ್ಲಿ ಕನಸು ಕಂಡು ಕಡೆಗೂ ಈ ಮೂಲಕ ನನಸು ಮಾಡಿಕೊಂಡ ಚಿತ್ರತಂಡದ ಪಾಲಿಗೆ ಇದಕ್ಕಿಂತಲೂ ಖುಷಿಯ ಸಂಗತಿ ಬೇರ್ಯಾವುದಿರಲು ಸಾಧ್ಯ?
ಈ ಸಿನಿಮಾ ಮೂಲಕವೇ ಇಡೀ ತಂಡದ ಹೆಜ್ಜೆ ಮೊದಲುಗೊಂಡಿದೆ. ನಿರ್ದೇಶಕ ವಸಿಷ್ಟ ಬಂಟನೂರು, ನಾಯಕರಾದ ಸಂತೋಷ್, ಮಧು ಸೇರಿದಂತೆ ಬಹುತೇಕರಿಗಿದು ಪ್ರಥಮ ಹೆಜ್ಜೆ. ಆದರೆ ಈ ಹಂತದಲ್ಲಿಯೇ ಈ ಸಿನಿಮಾ ಸೃಷ್ಟಿಸಿರೋ ಕ್ರೇಜ್ ಮಾತ್ರ ಎಂಥವರೂ ಬೆರಗಾಗುವಂತಿದೆ. ಅದರಲ್ಲಿಯೂ ಇತ್ತೀಚೆಗೆ ಲಾಂಚ್ ಆಗಿರೋ ಟ್ರೈಲರ್ ಅಂತೂ ಸಾಮಾಜಿಕ ಜಾಲತಾಣದ ತುಂಬಾ ಟ್ರೆಂಡ್ ಸೆಟ್ ಮಾಡಿದೆ. ಈ ಮೂಲಕವೇ ಹೆಚ್ಚು ಹೆಚ್ಚು ಪ್ರೇಕ್ಷಕರನ್ನೂ ತಲುಪಿಕೊಂಡಿದೆ.
ಈ ಟ್ರೈಲರ್ ಹೊಸಬರ ತಂಡದಿಂದಲೇ ರೂಪಿಸಲ್ಪಟ್ಟಿದ್ದರೂ ಕೂಡಾ ಅದರಲ್ಲಿ ಅನುಭವಸ್ಥರ ಕಸುಬುದಾರಿಕೆ ಎದ್ದು ಕಾಣಿಸುತ್ತಿದೆ. ಈ ವಿಚಾರ ದೂರದಲ್ಲೆಲ್ಲೋ ಕೂತು ನೋಡುವ ಪ್ರೇಕ್ಷಕರ ಅರಿವಿಗೂ ಬಂದಿದೆ. ಆದ್ದರಿಂದಲೇ ಈ ಬಗ್ಗೆ ಸಕಾರಾತ್ಮಕ ಅಭಿಪ್ರಾಯ, ಮೆಚ್ಚುಗೆಗಳೇ ಕರ್ನಾಟಕದ ಮೂಲೆ ಮೂಲೆಗಳಿಂದಲೂ ಹರಿದು ಬರುತ್ತಿವೆ. ಇದರಿಂದಾಗಿ ನಿರ್ದೇಶಕ ವಸಿಷ್ಟ ಬಂಟನ ಊರು ಖುಷಿಗೊಂಡಿದ್ದಾರೆ. ಯಾಕೆಂದರೆ ಅವರು ಈ ಆರಂಭದ ಹೆಜ್ಜೆಯಲ್ಲಿಯೇ ನಿರ್ದೇಶನದಾಚೆಗೂ ಕೊರಿಯೋಗ್ರಫಿ, ಗೀತರಚನೆ ಸೇರಿದಂತೆ ಬಹಳಷ್ಟು ಜವಾಬ್ದಾರಿಗಳನ್ನು ಅವರು ನಿರ್ವಹಿಸಿದ್ದಾರೆ. ಅದಕ್ಕೆಲ್ಲ ಉತ್ತಮ ಪ್ರತಿಕ್ರಿಯೆಗಳೇ ಬರುತ್ತಿರೋದರಿಂದ ಅವರಲ್ಲಿ ಗೆಲುವಿನ ಭರವಸೆ ಗಟ್ಟಿಯಾಗಿದೆ.