ಎಂ.ರಮೇಶ್ ರೆಡ್ಡಿಯವರು ಅಪ್ಪಟ ಸಿನಿಮಾ ಪ್ರೇಮದಿಂದ ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಈ ಚಿತ್ರದ ಮೂಲಕ ಮಾಸ್ ಹೀರೋ ಆಗಿ ಭಿನ್ನವಾದೊಂದು ಪಾತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಹೊಸಾ ಹುಡುಗನ ಚಿತ್ರವೊಂದು ಅಗಾಧ ಪ್ರಮಾಣದಲ್ಲಿ ಕ್ರೇಜ್ ಹುಟ್ಟಿಸಿದ ರೀತಿಯೂ ಸೇರಿದಂತೆ ಪ್ರೇಕ್ಷಕರು ಈ ಚಿತ್ರದ ಬಗ್ಗೆ ಭರವಸೆಯಿಟ್ಟಿರೋದಕ್ಕೆ ದಂಡಿ ದಂಡಿ ಕಾರಣಗಳಿವೆ.
ಗುರುದೇಶಪಾಂಡೆ ನಿರ್ದೇಶನ ಮಾಡಿರೋ ಚಿತ್ರ ಪಡ್ಡೆಹುಲಿ. ಈ ಹಿಂದೆ ರಾಜಾಹುಲಿ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವರಿಗೇ ದೊಡ್ಡ ಮಟ್ಟದಲ್ಲಿ ಬ್ರೇಕ್ ಕೊಟ್ಟಿದ್ದವರು ಗುರುದೇಶಪಾಂಡೆ. ಪಡ್ಡೆಹುಲಿಯನ್ನೂ ಕೂಡಾ ಅವರು ಅಂಥಾದ್ದೇ ಶ್ರದ್ಧೆ ಮತ್ತು ಕ್ರಿಯಾಶೀಲತೆಯಿಂದಲೇ ರೂಪಿಸಿದ್ದಾರೆ. ಆದ್ದರಿಂದಲೇ ಈ ಚಿತ್ರದ ಮೂಲಕ ಮತ್ತೋರ್ವ ಮಾಸ್ ಹೀರೋ ಹುಟ್ಟಿಕೊಳ್ಳುವ ಲಕ್ಷಣಗಳೇ ಎಲ್ಲಡೆ ಕಾಣಿಸುತ್ತಿದೆ.
ನಾಯಕನಾಗಿ ಶ್ರೇಯಸ್ ಪಾಲಿಗೆ ಇದು ಮೊಟ್ಟಮೊದಲ ಚಿತ್ರ. ಆದರೆ ಟ್ರೈಲರ್ ಮತ್ತು ಹಾಡುಗಳನ್ನು ನೋಡಿದವರಿಗೆಲ್ಲ ಈ ಮಾತನ್ನು ನಂಬೋದು ತುಸು ಕಷ್ಟವಾಗುವಂತಿದೆ. ಯಾಕೆಂದರೆ, ಶ್ರೇಯಸ್ ಪಕ್ಕಾ ಪಳಗಿದ ನಟನಂತೆ, ಈಗಾಗಲೇ ಒಂದಷ್ಟು ಚಿತ್ರಗಳಲ್ಲಿ ನಟಿಸಿದ ಅನುಭವ ಹೊಂದಿರುವವರಂತೆ ಅಬ್ಬರಿಸಿದ್ದಾರೆ. ಅತ್ತ ನಿರ್ದೇಶಕ ಗುರು ದೇಶಪಾಂಡೆಯವರ ಶ್ರದ್ಧೆ ಇತ್ತ ನಿರ್ಮಾಪಕರಾದ ಎಂ. ರಮೇಶ್ ರೆಡ್ಡಿಯವರ ಸಿನಿಮಾ ಪ್ರೇಮದ ಜೊತೆಗೆ ಶ್ರೇಯಸ್ ಅವರ ಶ್ರಮವೂ ಸೇರಿಕೊಂಡು ಪಡ್ಡೆಹುಲಿ ಪೊಗದಸ್ತಾಗಿಯೇ ರೆಡಿಯಾಗಿದೆ.