ಸಿನಿಮಾವೊಂದು ಅಭೂತಪೂರ್ವ ಗೆಲುವು ಸಾಧಿಸುತ್ತದೆ ಅನ್ನೋ ಸೂಚನೆ ಸಿಗೋದು ಆ ಚಿತ್ರದ ಟ್ರೇಲರ್ ಮತ್ತು ಬಿಡುಗಡೆಯಾದ ಹಾಡುಗಳು. ಹಾಡುಗಳು ಹಿಟ್ ಆದರೆ ಸಿನಿಮಾ ಕೂಡಾ ಗೆಲುವು ಸಾಧಿಸುತ್ತದೆ ಅನ್ನೋದು ಹಳೇ ನಂಬಿಕೆ. ಈಗ ಪೈಲ್ವಾನ್ ಸಿನಿಮಾದ ಹಾಡುಗಳು ಸೃಷ್ಟಿಸಿರುವ ಮೋಡಿ ನೋಡಿದರೆ ಈ ಚಿತ್ರ ಬಾಕ್ಸಾಫೀಸಿನಲ್ಲೂ ದೊಡ್ಡ ಮಟ್ಟದ ದಾಖಲೆ ನಿರ್ಮಿಸೋದು ಗ್ಯಾರೆಂಟಿ ಎನ್ನುವಂತಾಗಿದೆ.
ಉತ್ತರ ಕರ್ನಾಟಕ ನೆರೆ ಹಾವಳಿಯ ನೋವಿನಿಂದ ಚಿತ್ರದುರ್ಗದಲ್ಲಿ ರಿಲೀಸ್ ಆಗಬೇಕಿದ್ದ ಪೈಲ್ವಾನ್ ಆಡಿಯೋವನ್ನು ಮುಂದೂಡಿದ್ದಲ್ಲದೇ ಬೆಂಗಳೂರಿಗೆ ಸ್ಥಳ ಬದಲಾವಣೆ ಮಾಡಿಕೊಂಡಿದ್ದ ಚಿತ್ರತಂಡ ಪೈಲ್ವಾನ್ ಚಿತ್ರದ ಧ್ರುವತಾರೆ ಎಂಬ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ವಿಶೇಷವೆಂದರೆ ಈ ಹಾಡನ್ನು ಕರ್ನಾಟಕ, ಮಹಾರಾಷ್ಟ್ರ ಕೇರಳ ನೆರೆ ಸಂತ್ರಸ್ತರ ನೆರವಿಗೆ ಬಂದ ಧ್ರುವತಾರೆಗಳಾದ ಭಾರತೀಯ ಸೇನೆ, ನೆರೆ ಪರಿಹಾರ ತಂಡಗಳು, ಸ್ವಯಂ ಸೇವಾ ಕಾರ್ಯಕರ್ತರಿಗೆ ಪೈಲ್ವಾನ್ ಚಿತ್ರತಂಡ ಸಮರ್ಪಿಸಿದೆ.
ರಿಲೀಸ್ ಆಗಿರುವ ಧ್ರುವತಾರೆ ಎಂಬ ಲಿರಿಕಲ್ ಹಾಡು ಫೀಲಿಂಗ್ ಸಾಂಗ್ ಆಗಿದ್ದು, ಸುನೀಲ್ ಶೆಟ್ಟಿ, ನಾಯಕಿ ಆಕಾಂಕ್ಷ ಹಾಗೂ ಸುದೀಪ್ ಅವರ ಸೀನ್ ಪಿಕ್ಚರ್ ಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕಿಚ್ಚ ಸುದೀಪ್ ಅಭಿನಯಿಸಿರುವ ಈ ಸಿನಿಮಾವನ್ನು ಹೆಬ್ಬುಲಿ ಕೃಷ್ಣ ನಿರ್ದೇಶನದ ಜತೆಗೆ ನಿರ್ಮಾಣವನ್ನು ಮಾಡುತ್ತಿದ್ದು, ಮುಂದಿನ ತಿಂಗಳ ಸೆಪ್ಟೆಂಬರ್ 12ರಂದು ಪೈಲ್ವಾನ್ ಬಿಡುಗಡೆಯಾಗಲಿದೆ.
ಮೈ ನವಿರೇಳಿಸುವ ಕುಸ್ತಿಯ ದೃಶ್ಯಗಳು, ಕಾಡುವ ಕತೆ, ಜೊತೆಗೆ ಸುಂದರವಾದ ಹಾಡುಗಳು, ದೃಶ್ಯ ವೈಭವ - ಪೈಲ್ವಾನ್ ಚಿತ್ರದ ಒಂದೊಂದು ವಿಚಾರಗಳನ್ನೂ ಗಮನಿಸುತ್ತಿದ್ದರೆ ಕನ್ನಡಿಗರ ಮನಸ್ಸಿನಲ್ಲಿ `ನಮ್ಮ ಕರ್ನಾಟಕದಲ್ಲಿ ಇಂಥಾ ಕ್ವಾಲಿಟಿ ಸಿನಿಮಾಗಳು ನಿರ್ಮಾಣವಾಗಿ, ನಮ್ಮ ಸಿನಿಮಾಗಳು ಬೇರೆ ಭಾಷೆಗಳಲ್ಲೂ ಬಿಡುಗಡೆಗೊಳ್ಳುತಿದೆಯಲ್ಲಾ?’ ಎಂಬ ಹೆಮ್ಮೆಯ ಭಾವನೆ ಮೂಡುತ್ತದೆ. ಇದೆಲ್ಲವನ್ನೂ ಸಾಧ್ಯವಾಗಿಸಿದ ಕಿಚ್ಚ ಸುದೀಪ ಮತ್ತು ನಿರ್ದೇಶಕ ಕೃಷ್ಣ ಅವರನ್ನು ಕನ್ನಡಿಗರೆಲ್ಲರೂ ಅಭಿನಂದಿಸಲೇಬೇಕು.