ಥಿಯೇಟರುಗಳಲ್ಲೂ ಪೈಲ್ವಾನ್ ಪವರ್!

ಗುರುವಾರ, 5 ಸೆಪ್ಟಂಬರ್ 2019 (17:44 IST)
ಈ ಹಿಂದೆ ಗಜಕೇಸರಿ ಸಿನಿಮಾ ಮೂಲಕ ಚಿತ್ರ ನಿರ್ದೇಶಕರಾಗಿ, ನಟ ಯಶ್ ಅವರಿಗೆ ದೊಡ್ಡ ಮಟ್ಟದ ಸ್ಟಾರ್ ವರ್ಚಸ್ಸು ತಂದುಕೊಟ್ಟವರು ನಿರ್ದೇಶಕ ಕೃಷ್ಣ. ಅದಕ್ಕೂ ಮುಂಚೆ ಮುಂಗಾರು ಮಳೆ ಸೇರಿದಂತೆ ಹಲವಾರು ಸಿನಿಮಾಗಳಿಗೆ ಛಾಯಾಗ್ರಾಹಕರಾಗಿದ್ದವರು ಕೂಡಾ ಇದೇ ಕೃಷ್ಣ. ಛಾಯಾಗ್ರಾಹಕರಾಗಿದ್ದಾಗಲೇ ಕನ್ನಡ ಚಿತ್ರರಂಗವನ್ನು ಬಾಲಿವುಡ್ ರೇಂಜಿಗೆ ಕೊಂಡೊಯ್ದಿದ್ದ ಕೃಷ್ಣ ನಂತರ ನಿರ್ದೇಶಕರಾದ ಮೇಲೆ ಮತ್ತಷ್ಟು ಎತ್ತರಕ್ಕೇರುತ್ತಿದ್ದಾರೆ.

ಮುಂಗಾರುಮಳೆ ಸಿನಿಮಾ ಗೆಲ್ಲಲು ಅದರ ಛಾಯಾಗ್ರಹಣ, ಆವತ್ತಿನ ಕಾಲಕ್ಕೇ ಜೋಗ್ ಜಲಪಾತವನ್ನು ಕೃಷ್ಣ ಸೆರೆ ಹಿಡಿದ ರೀತಿಯೂ ಕಾರಣ ಅನ್ನೋದು ಬಹುತೇಕರಿಗೆ ಗೊತ್ತಿರುವ ವಿಚಾರ. ಈಗ ನಿರ್ದೇಶಕನಾಗಿ ಕೂಡಾ ಕೃಷ್ಣ ಅವರು ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ. ನಿರ್ದೇಶಕ ಕೃಷ್ಣ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್’ನಲ್ಲಿ ತಯಾರಾಗುತ್ತಿರುವ ಎರಡನೇ ಸಿನಿಮಾ ಪೈಲ್ವಾನ್. ಈ ಹಿಂದೆ ಹೆಬ್ಬುಲಿ ಚಿತ್ರದ ಮೂಲಕ ಕರ್ನಾಟಕದಲ್ಲಿ ಸಾಕಷ್ಟು ವಿಚಾರಗಳಲ್ಲಿ ದಾಖಲೆ ಬರೆದಿದ್ದ ಈ ಜೋಡಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತಿಹಾಸ ಸೃಷ್ಟಿಸುತ್ತಿದೆ.
ಕೆ.ಜಿ.ಎಫ್. ಸಿನಿಮಾ ಅತಿ ಹೆಚ್ಚು ಥಿಯೇಟರುಗಳಲ್ಲಿ ರಿಲೀಸಾಗಿತ್ತು. ಈಗ ಅದೇ ಕೆ.ಆರ್.ಜಿ. ಸ್ಟುಡಿಯೋ ಪೈಲ್ವಾನ್ ಸಿನಿಮಾವನ್ನು ಬರೋಬ್ಬರಿ ಎರಡೂವರೆ ಸಾವಿರದಿಂದ ಮೂರು ಸಾವಿರ ಥಿಯೇಟರುಗಳಲ್ಲಿ ಬಿಡುಗಡೆ ಮಾಡುವ ಪ್ಲಾನು ಮಾಡಿದೆ. ಈಗಾಗಲೇ ಸೆನ್ಸಾರ್ ಮುಗಿಸಿಕೊಂಡಿರುವ ಪೈಲ್ವಾನ್ ಸೆಪ್ಟೆಂಬರ್ 12ಕ್ಕೆ ರಿಲೀಸಾಗುತ್ತಿದೆ. ಸದ್ಯ ಬಿಡುಗಡೆಗೊಂಡಿರುವ ಟ್ರೇಲರ್ ಚಿತ್ರ ಪ್ರೇಮಿಗಳಲ್ಲಿ ಬಾರೀ ಕ್ರೇಜ್ ಹುಟ್ಟುಹಾಕಿದೆ. ಅಭಿಮಾನದ ನಟನ ಸಿನಿಮಾಗಾಗಿ ಅಭಿಮಾನಿಗಳು ಹುಚ್ಚೆದ್ದು ಕಾಯುತ್ತಿದ್ದಾರೆ.
ಕಿಚ್ಚ ಸುದೀಪ್ ಅವರ ವೃತ್ತಿ ಜೀವನದಲ್ಲೂ `ಪೈಲ್ವಾನ್’ ಒಂದು ಮೈಲಿಗಲ್ಲು. ಮುಂದೆ ಅವರು ನಟಿಸುವ ಸಿನಿಮಾಗಳು ಜಗತ್ತಿನಾದ್ಯಂತ ಸಾವಿರಾರು ಸಿನಿಮಾಗಳಲ್ಲಿ ಬಿಡುಗಡೆಯಾಗೋದು ಸಹಜ. ಆದರೆ ಮೊದಲ ಬಾರಿ ಹತ್ತಿರತ್ತಿರ ಮೂರು ಸಾವಿರ ಥಿಯೇಟರುಗಳಲ್ಲಿ ತಮ್ಮ ಸಿನಿಮಾ ರಿಲೀಸ್ ಆಗುತ್ತಿರುವುದು ಸುದೀಪ್ ಅವರ ಪಾಲಿಗೆ ಎಂದೂ ಮರೆಯದ ವಿಚಾರ. ಆರಂಭದ ದಿನಗಳಲ್ಲಿ `ಸ್ಪರ್ಶ’ದಂಥಾ ಸಿನಿಮಾ ಬಂದಾಗ ಇದೇ ಸುದೀಪ್ ಥಿಯೇಟರಿನ ಬಳಿ ನಿಂತು `ಜನ ಬಂದರೆ ಸಾಕು’ ಅಂತಾ ಬಯಸಿದ್ದಿದೆ. ಈಗ ಸುದೀಪ್ ಸಿನಿಮಾ ಸಾವಿರಗಟ್ಟಲೆ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಅಗಣಿತ ಜನ ಇವರ ಸಿನಿಮಾಗಾಗಿ ಕಾತರಿಸುತ್ತಾರೆ. ಇದು ಒಬ್ಬ ಪರಿಪೂರ್ಣ ನಟನ ಪಾಲಿನ ನಿಜವಾದ ಗೆಲುವು ಅನ್ನೋದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು.
ಈ ಚಿತ್ರದಲ್ಲಿ ಆಕಾಂಕ್ಷಾ ಸಿಂಗ್ ಕಿಚ್ಚನ ನಾಯಕಿಯಾಗಿ ನಟಿಸಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಅವಿನಾಶ್, ಶರತ್ ಲೋಹಿತಾಶ್ವ ಅಭಿನಯಿಸಿದ್ದಾರೆ. ಹಾಲಿವುಡ್ ನ ಲಾರ್ನೆಲ್ ಸ್ಟೋವಲ್ ಸಾಹಸ, ಅರ್ಜುನ್ ಜನ್ಯಾ ಸಂಗೀತ, ಕರುಣಾಕರ್ ಛಾಯಾಗ್ರಹಣ ಚಿತ್ರಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ