ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಕಾರಿನ ಮೇಲೆ ದಾಳಿ ಮಾಡಲು ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ನೊಂದಿಗೆ ನಂಟು ಹೊಂದಿರುವ ನಾಲ್ವರು ವ್ಯಕ್ತಿಗಳನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪಾಕಿಸ್ತಾನಿ ಶಸ್ತ್ರಾಸ್ತ್ರ ಪೂರೈಕೆದಾರರಿಂದ ಶಸ್ತ್ರಾಸ್ತ್ರ ಪಡೆದು ಸಲ್ಮಾನ್ ಖಾನ್ ಕಾರಿನ ಮೇಲೆ ದಾಳಿ ಮಾಡಲು ಈ ತಂಡ ಸಂಚು ರೂಪಿಸಿತ್ತು. ಇದನ್ನು ಮುಂಬೈ ಪೊಲೀಸರು ಭೇದಿಸಿದ್ದಾರೆ.
ಧನಂಜಯ್ ಅಲಿಯಾಸ್ ಅಜಯ್ ಕಶ್ಯಪ್, ಗೌರವ್ ಭಾಟಿಯಾ ಅಲಿಯಾಸ್ ನಹ್ವಿ, ವಾಸ್ಪಿ ಖಾನ್ ಅಲಿಯಾಸ್ ವಾಸಿಂ ಚಿಕ್ನಾ ಮತ್ತು ರಿಜ್ವಾನ್ ಖಾನ್ ಅಲಿಯಾಸ್ ಜಾವೇದ್ ಖಾನ್ ಬಂಧಿತ ಆರೋಪಿಗಳು.
ಲಾರೆನ್ಸ್ ಬಿಷ್ಣೋಯ್, ಅನ್ಮೋಲ್ ಬಿಷ್ಣೋಯ್, ಸಂಪತ್ ನೆಹ್ರಾ ಮತ್ತು ಗೋಲ್ಡಿ ಬ್ರಾರ್ ಸೇರಿದಂತೆ 17ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ತನ್ನ ಕೆನಡಾ ಮೂಲದ ಸೋದರ ಸಂಬಂಧಿ ಅನ್ಮೋಲ್ ಬಿಷ್ಣೋಯ್ ಮತ್ತು ಸಹವರ್ತಿ ಗೋಲ್ಡಿ ಬ್ರಾರ್ ಜತೆಗೆ ಪಾಕಿಸ್ತಾನಿ ಶಸ್ತ್ರಾಸ್ತ್ರ ವ್ಯಾಪಾರಿಯಿಂದ ಶಸ್ತ್ರಾಸ್ತ್ರಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಖಾನ್ ಅವರ ಕಾರಿನ ಮೇಲೆ ದಾಳಿ ಮಾಡುವುದು ಮತ್ತು ತೋಟದ ಮನೆಯ ಮೇಲೆ ಅಟ್ಯಾಕ್ ಮಾಡುವುದು ಲಾರೆನ್ಸ್ ಬಿಷ್ಣೋಯ್ ಪ್ಲ್ಯಾನ್ ಆಗಿತ್ತು ಎಂದು ತಿಳಿದುಬಂದಿದೆ.
ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ಬಳಿಕ, ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿದ್ದರು. ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಅವರನ್ನು ಗುಜರಾತ್‌ನಲ್ಲಿ ಬಂಧಿಸಲಾಗಿತ್ತು. ಅನುಜ್ ಥಾಪನ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಪಂಜಾಬ್‌ನಲ್ಲಿ ಏಪ್ರಿಲ್ 26 ರಂದು ಬಂಧಿಸಲಾಗಿತ್ತು.