ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಗೆ ಮೊದಲ ದಿನ ಬಿರಿಯಾನಿ ಬಾಡೂಟ ನೀಡಿದ್ದು ಎಲ್ಲರ ಟೀಕೆಗೆ ಗುರಿಯಾಗಿತ್ತು.
ದರ್ಶನ್ ರನ್ನು ಜೂನ್ 11 ರಂದು ಮೈಸೂರಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿತ್ತು. ಮೊದಲ ದಿನ ಪೊಲೀಸ್ ಠಾಣೆಯಲ್ಲಿ ಕಳೆದ ದರ್ಶನ್ ಮತ್ತು ಸ್ನೇಹಿತರಿಗೆ ಪೊಲೀಸರು ಹತ್ತಿರದ ಹೋಟೆಲ್ ನಿಂದ ಬಿರಿಯಾನಿ ತರಿಸಿಕೊಟ್ಟಿದ್ದರು. ಬಿರಿಯಾನಿ ಕೊಂಡೊಯ್ಯುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೇ ಸಾರ್ವಜನಿಕರಿಂದ ತೀವ್ರ ಟೀಕೆ ಎದುರಾಗಿತ್ತು.
ಆರೋಪಿಗಳು ವಿಐಪಿಗಳಾದರೆ ರಾಜಾತಿಥ್ಯ ನೀಡುತ್ತೀರಾ ಎಂದು ನೆಟ್ಟಿಗರು ಟೀಕಿಸಿದ್ದರು. ಆದರೆ ದರ್ಶನ್ ಅಂದು ಬಿರಿಯಾನಿ ಸೇವಿಸದೇ ಕೇವಲ ಮಜ್ಜಿಗೆ ಮಾತ್ರ ಸೇವಿಸಿದ್ದರು ಎಂದು ತಿಳಿದುಬಂದಿತ್ತು. ಮರುದಿನವೂ ಬೆಳಿಗ್ಗೆ ಆರೋಪಿಗಳಿಗೆ ರೈಸ್ ಬಾತ್ ಮತ್ತು ಇಡ್ಲಿ ತರಿಸಿಕೊಡಲಾಗಿತ್ತು.
ಇದೀಗ ಆರೋಪಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಟೀಕೆಗಳು ಕೇಳಿಬಂದ ಬೆನ್ನಲ್ಲೇ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ನಿನ್ನೆಯಿಂದ ದರ್ಶನ್ ಮತ್ತು ಗ್ಯಾಂಗ್ ಗೆ ಕೇವಲ ಅನ್ನ, ಸಾರು ನೀಡಲಾಗಿದೆ. ಊಟದ ಬಳಿಕವೂ ತಡರಾತ್ರಿವರೆಗೆ ಅವರನ್ನು ಸತತವಾಗಿ ವಿಚಾರಣೆಗೊಳಪಡಿಸಲಾಯಿತು.