ರೈತ ದೇಶದ ಬೆನ್ನೆಲುಬೆಂದೇ ಬಿಂಬಿತನಾಗಿರೋ ಭಾರತದ ಆತ್ಮ. ಕೃಷಿ ಇರದ, ರೈತಾಪಿ ವರ್ಗ ಇಲ್ಲದ ಸಮಾಜವನ್ನು ಯಾರೂ ಕೂಡಾ ಊಹಿಸಿಕೊಳ್ಳಲು ಸಾಧ್ಯವಿಲ್ಲ. ದುರಂತವೆಂದರೆ, ಪಟ್ಟಣ ಪ್ರದೇಶಗಳಲ್ಲಿ ವಾಸಿಸುವ ಜನರು ಕಲ್ಪಿಸಿಕೊಳ್ಳಲೂ ಸಾಧ್ಯವಾಗದಂಥಾ ಭೀಕರ ಸಮಸ್ಯೆಗಳಿಂದ ರೈತರು ಕಂಗಾಲಾಗಿದ್ದಾರೆ.
ಮನು ಕೆ ಶೆಟ್ಟಿಹಳ್ಳಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರವನ್ನು ಕನ್ನಡ ಚಿತ್ರರಂಗದ ಸದಭಿರುಚಿಯ ನಿರ್ಮಾಪಕರಾದ ಸುರೇಶ್ ನಿರ್ಮಾಣ ಮಾಡಿದ್ದಾರೆ. ಇದು ರೈತರ ಕಥಾನಕ ಹೊಂದಿದ್ದರೂ ರಣಹೇಡಿ ಎಂಬ ಹೆಸರನ್ನು ಯಾಕಿಡಲಾಗಿದೆ ಅನ್ನೋ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ. ಆದರೆ ರೈತ ರಣಹೇಡಿಯಲ್ಲ ಯೋಧ ಎಂಬಂಥಾ ಕಥಾ ತಿರುಳನ್ನು ಈ ಸಿನಿಮಾ ಒಳಗೊಂಡಿದೆ ಎಂಬ ಸ್ಪಷ್ಟೀಕರಣವನ್ನು ಚಿತ್ರತಂಡ ಕೊಡುತ್ತದೆ. ಅಷ್ಟಕ್ಕೂ ರೈತರ ಬದುಕೇ ಒಂದು ಹೋರಾಟ. ಅದಕ್ಕೆ ತಕ್ಕುದಾಗಿಯೇ ಈ ಸಿನಿಮಾದಲ್ಲಿ ಮೈ ನವಿರೇಳಿಸುವಂಥಾ ದೇಸೀ ಸಾಹಸ ಸನ್ನಿವೇಶಗಳೂ ಇವೆಯಂತೆ.
ಈ ಸಿನಿಮಾದಲ್ಲಿ ರೈತ ಸಮುದಾಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಅದನ್ನು ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿಯೇ ನಿರೂಪಿಸಲಾಗಿದೆ. ಹಳ್ಳಿ ಜೀವನ ಅಂದಮೇಲೆ ಅಲ್ಲಿ ದ್ವೇಷಾಸೂಯೆ, ಜಗಳ, ಕಾದಾಟಗಳೆಲ್ಲ ಇದ್ದಿದ್ದೇ. ಅದೇ ರೀತಿ ಇಲ್ಲಿಯೂ ಎರಡು ಫೈಟಿಂಗುಗಳಿವೆ. ಆದರೆ ಅದಕ್ಕೆ ಯಾವುದೇ ಬಿಲ್ಡಪ್ಪುಗಳನ್ನು ಅಳವಡಿಸಲಾಗಿಲ್ಲ. ಆ ನೈಜತೆಯಲ್ಲಿಯೂ ಈ ಸಾಹಸ ಸನ್ನಿವೇಶಗಳು ಮಿರುಗುವಂತೆ ಕಟ್ಟಿ ಕೊಡಲಾಗಿದೆಯಂತೆ. ಈ ಎಲ್ಲ ವಿವರಗಳೂ ಕೂಡಾ ರಣಹೇಡಿಯ ಬಗೆಗಿನ ಕುತೂಹಲವನ್ನು ಇಮ್ಮಡಿಸುವಂತಿವೆ.