ಲವರ್ ಬಾಯ್ ಆಗಲೊಲ್ಲದ ರಗಡ್ ರಾಂಧವ!

ಮಂಗಳವಾರ, 13 ಆಗಸ್ಟ್ 2019 (16:03 IST)
ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಇದೇ ತಿಂಗಳ ಇಪ್ಪತ್ಮೂರನೇ ತಾರೀಕಿನಂದು ತೆರೆಗೆ ಬರಲು ಮಹೂರ್ತ ಫಿಕ್ಸಾಗಿದೆ. ಅಖಂಡ ಎರಡು ವರ್ಷಗಳ ಶ್ರಮ, ಆ ಅವಧಿಯ ತುಂಬಾ ಪ್ರತೀ ಕ್ಷಣವೂ ಇದರಲ್ಲಿನ ಪಾತ್ರಗಳಿಗಾಗಿ ಮಾಡಿಕೊಂಡ ತಯಾರಿ ಮತ್ತು ಶ್ರದ್ಧೆಗಳೆಲ್ಲವೂ ಫಲ ನೀಡೋ ಕ್ಷಣಗಳೂ ಕೂಡಾ ಹತ್ತಿರಾಗಿವೆ. ನಿರ್ದೇಶಕ ಸುನೀಲ್ ಆಚಾರ್ಯ ಮತ್ತು ನಾಯಕ ಭುವನ್ ಪೊನ್ನಣ್ಣ ಪಾಲಿಗೂ ಕೂಡಾ ಇದು ಮಹತ್ವದ ಹೆಜ್ಜೆ. ಇಬ್ಬರೂ ಕೂಡಾ ಮೊದಲ ಪ್ರಯತ್ನದಲ್ಲಿಯೇ ಯಾರಾದರೂ ಹಿಂದೇಟು ಹಾಕುವಂಥಾ ಸವಾಲನ್ನೇ ರಾಂಧವ ಮೂಲಕ ಸ್ವೀಕರಿಸಿದ್ದಾರೆ.
ಬಿಗ್ಬಾಸ್ ಶೋ ಆದ ನಂತರದಲ್ಲಿ ಭುವನ್ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಾರೆಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಕೆಲ ತಿಂಗಳುಗಳೇ ಕಳೆದರೂ ಅವರು ಒಂದು ಸಿನಿಮಾವನ್ನು ಒಪ್ಪಿಕೊಂಡ ಸುದ್ದಿಯೂ ಬಂದಿರಲಿಲ್ಲ. ಹಾಗಂತ ಅವರ ಮುಂದೆ ಅವಕಾಶಗಳೇ ಇರಲಿಲ್ಲ ಅಂದುಕೊಳ್ಳುವಂತಿರಲಿಲ್ಲ. ಭುವನ್ ಬಿಗ್ಬಾಸ್ ಶೋನಿಂದ ಹೊರ ಬರುತ್ತಲೇ ಅವರಿಗಾಗಿ ಬಹಳಷ್ಟು ಕಥೆಗಳು ಸಿದ್ಧಗೊಂಡಿದ್ದವು. ಆದರೆ ಅವೆಲ್ಲವೂ ಭುವನ್ರನ್ನು ಲವರ್ ಬಾಯ್ ಆಗಿ ತೋರಿಸುವ ಉತ್ಸಾಹವನ್ನಷ್ಟೇ ಹೊಂದಿದ್ದವು. ಆದರೆ ಅವರಿಗೆ ಮಾತ್ರ ಹೀರೋ ಆಗಿ ಲಾಂಚ್ ಆಗೋದಾದರೆ ವಿಭಿನ್ನ ಕಥೆಯ ಮೂಲಕವೇ ಆಗಬೇಕೆಂಬ ಅಚಲ ಆಕಾಂಕ್ಷೆಯಿತ್ತು.
ಈ ಕಾರಣದಿಂದಲೇ ಆ ಎಲ್ಲ ಕಥೆಗಳನ್ನೂ ಬದಿಗೆ ಸರಿಸಿ ಕಾಯುತ್ತಿದ್ದ ಭುವನ್ರ ಮುಂದೆ ಪ್ರತ್ಯಕ್ಷವಾಗಿದ್ದು ರಾಂಧವ ಕಥೆ. ಭುವನ್ ಗೆಳೆಯ ಗಾಯಕ ಶಶಾಂಕ್ ಶೇಷಗಿರಿ ಸುನೀಲ್ ಅವರು ಸಿದ್ಧಗೊಳಿಸಿಕೊಂಡಿದ್ದ ಕಥೆಯ ಬಗ್ಗೆ ಹೇಳಿದಾಗಲೇ ಭುವನ್ ಉತ್ಸುಕರಾಗಿದ್ದರಂತೆ. ಆ ಬಳಿಕ ಸುನೀಲ್ ಆಚಾರ್ಯ ಕಥೆ ಹೇಳಿದಾಕ್ಷಣವೇ ಭುವನ್ ಚಿತ್ರೀಕರಣಕ್ಕೇ ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ. ಹಾಗೆ ಭುವನ್ ನಿಂತ ನಿಲುವಿನಲ್ಲಿಯೇ ರಾಂಧವನನ್ನು ಒಪ್ಪಿಕೊಳ್ಳಲು ಕಾರಣವಾಗಿದ್ದದ್ದು ಅದರ ರಗಡ್ ಕಥೆ ಮತ್ತು ಮೂರು ಶೇಡುಗಳ ಸವಾಲಿನ ಪಾತ್ರಗಳು. ಕಡೆಗೂ ಭುವನ್ ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ತೃಪ್ತಿ ಹೊಂದಿದ್ದಾರೆ. ರಾಂಧವನ ಬಗ್ಗೆ ಈಗಿರೋ ಕ್ರೇಜ್ ನೋಡಿದರೆ ಈ ಸಿನಿಮಾ ಮೂಲಕವೇ ಅವರು ನಾಯಕನಾಗಿ ಕಾಲೂರಿ ನಿಲ್ಲೋ ಲಕ್ಷಣಗಳೇ ದಟ್ಟವಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ