ಹೈದರಾಬಾದ್: ಕಳೆದ ತಿಂಗಳು ಲೈಂಗಿಕ ಕಿರುಕುಳದ ಆರೋಪದಲ್ಲಿ ಬಂಧಿಯಾಗಿದ್ದ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅವರಿಗೆ ಹೈದರಾಬಾದ್‌ನ ರಂಗಾರೆಡ್ಡಿ ನ್ಯಾಯಾಲಯ ಗುರುವಾರ (ಅಕ್ಟೋಬರ್ 24, 2024) ಜಾಮೀನು ಮಂಜೂರು ಮಾಡಿದೆ.
ಲೈಂಕಿಗ ಕಿರುಕುಳದಡಿಯಲ್ಲಿ ಚಂಚಲಗುಡ ಸೆಂಟ್ರಲ್ ಜೈಲಿನಲ್ಲಿ ಒಂದು ತಿಂಗಳು ಮತ್ತು ನಾಲ್ಕು ದಿನಗಳ ನಂತರ ಜಾನಿ ಅವರಿಗೆ ಬಿಡುಗಡೆ ಭಾಗ್ಯ ದೊರಕಿದೆ.
ಸೆಪ್ಟೆಂಬರ್‌ನಲ್ಲಿ, ಜಾನಿ ಅವರ ಮಹಿಳಾ ಸಹೋದ್ಯೋಗಿಯಿಂದ ಲೈಂಗಿಕ ದೌರ್ಜನ್ಯದ ಆರೋಪದ ನಂತರ ಸೈಬರಾಬಾದ್ ಕಮಿಷನರೇಟ್‌ನ ನಾರ್ಸಿಂಗಿ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸಿಎಸ್‌ಒ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
21 ವರ್ಷದ ಸಂತ್ರಸ್ತೆಯೊಬ್ಬರು ಜಾನಿ ಅವರ ಜತೆ ಕೆಲಸ ಮಾಡಲು ಆರಂಭಿಸಿದಾಗಿನಿಂದ ಕಳೆದ ಆರು ವರ್ಷಗಳಿಂದ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ ಎಂದು ಆರೋಪ ಎಸಗಿದ್ದರು.
ಜಾಮೀನು ಷರತ್ತುಗಳ ಪ್ರಕಾರ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿ ಪ್ರಕರಣದ ತನಿಖೆಗೆ ಸಹಕರಿಸಬೇಕಾಗುತ್ತದೆ. ಸಂತ್ರಸ್ತೆಯನ್ನು ಸಂಪರ್ಕಿಸಲು ಪ್ರಯತ್ನಿಸಬಾರದು ಮತ್ತು ಈ ಪ್ರಕರಣದ ಕುರಿತು ಮಾಧ್ಯಮದ ಮುಂದೆ ಹಾಜರಾಗಬಾರದು ಮತ್ತು ದೇಶವನ್ನು ತೊರೆಯಬಾರದು ಎಂಬ ಇತರ ಷರತ್ತುಗಳೊಂದಿಗೆ ಜಾಮೀನು ನೀಡಲಾಗಿದೆ.
ಇದಕ್ಕೂ ಮುನ್ನ ಜಾನಿ ಅವರಿಗೆ ನದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಲು ಅವರಿಗೆ ನಾಲ್ಕು ದಿನಗಳ ಮಧ್ಯಂತರ ಜಾಮೀನು ನೀಡಲಾಗಿತ್ತು. ಆದರೆ ರಾಷ್ಟ್ರೀಯ ಪ್ರಶಸ್ತಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಿವಾಲಯ ಹಿಂಪಡೆಯಿತು.