ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಅಭಿಮಾನಿಗಳು ಈಗ ರಶ್ಮಿಕಾ ಮಂದಣ್ಣ ವಿಚಾರಕ್ಕೆ ಸಿಟ್ಟಾಗಿದ್ದಾರೆ. ಇದಕ್ಕೆ ಕಾರಣ ಆರ್ ಸಿಬಿ ಮರುನಾಮಕರಣದ ಪ್ರೋಮೋ ವಿಡಿಯೋ.
ಇದುವರೆಗೆ ಪ್ರೋಮೋ ವಿಡಿಯೋದಲ್ಲಿ ರಿಷಬ್ ಶೆಟ್ಟಿ, ಶಿವರಾಜ್ ಕುಮಾರ್, ಡ್ಯಾನಿಶ್ ಸೇಠ್, ಕಿಚ್ಚ ಸುದೀಪ್ ಸೇರಿದಂತೆ ಅಪ್ಪಟ ಕನ್ನಡಿಗರು ಬಂದು ಆರ್ ಸಿಬಿ ಹೊಸ ಹೆಸರಿನ ಬಗ್ಗೆ ಸುಳಿವು ನೀಡಿದ್ದರು. ಈ ಪ್ರೋಮೋಗಳು ಅಭಿಮಾನಿಗಳಿಗೆ ಭಾರೀ ಇಷ್ಟವಾಗಿತ್ತು ಕೂಡಾ.
ಆದರೆ ಈಗ ಇದೇ ಪ್ರೋಮೋದಲ್ಲಿ ರಶ್ಮಿಕಾ ಮಂದಣ್ಣರನ್ನು ಹಾಕಿಕೊಳ್ಳಲಾಗಿದೆ. ರಶ್ಮಿಕಾ ಕೂಡಾ ಬೆಂಗಳೂರು ಹೆಸರು ಬದಲಾಯಿಸುವ ಪ್ರೋಮೋ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು ಇದನ್ನು ನೋಡಿ ಆರ್ ಸಿಬಿ ಅಭಿಮಾನಿಗಳು ಸಿಟ್ಟಾಗಿದ್ದಾರೆ. ನಿಮಗೆ ಪ್ರೋಮೋ ಮಾಡಲು ಬೇರೆ ಯಾರೂ ಸಿಗಲಿಲ್ಲವೇ ಎಂದು ಕಿಡಿ ಕಾರಿದ್ದಾರೆ.
ಕನ್ನಡತಿಯೇ ಆದರೂ ಇದೀಗ ಕನ್ನಡವನ್ನೇ ಮರೆತಿದ್ದಾರೆ ಎಂದು ರಶ‍್ಮಿಕಾ ಮಂದಣ್ಣ ಮೇಲೆ ಅಭಿಮಾನಿಗಳಿಗೆ ಸಿಟ್ಟಿದೆ. ಸದ್ಯಕ್ಕೆ ಕನ್ನಡ ಬಿಟ್ಟು ಪರಭಾಷೆಗಳಲ್ಲಿ ಮಿಂಚುತ್ತಿರುವ ರಶ್ಮಿಕಾರನ್ನು ಹಾಕಿಕೊಳ್ಳುವ ಬದಲು ಬೇರೆ ಕನ್ನಡಿಗರನ್ನು ಹಾಕಿ ಪ್ರೋಮೋ ವಿಡಿಯೋ ಮಾಡಬಹುದಿತ್ತಲ್ಲಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.