ಬೆಂಗಳೂರು: ನಟ ದರ್ಶನ್ ಮತ್ತು ತಂಡದಿಂದ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ವಾದಿಸಲು ಸರ್ಕಾರದ ವಿಶೇಷ ಅಭಿಯೋಜಕರಾಗಿ ಹಿರಿಯ ವಕೀಲ ಪ್ರಸನ್ನಕುಮಾರ್ ನೇಮಕಗೊಂಡಿದ್ದಾರೆ.
ದರ್ಶನ್ ಆಪ್ತೆ ಪವಿತ್ರಾಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆನ್ನಲಾದ ರೇಣುಕಾಸ್ವಾಮಿಯನ್ನು ಜೂ.9 ರಂದು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಆಪ್ತೆ ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಇಂದು ಎಲ್ಲರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ. ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದರೆ ಪರಪ್ಪನ ಅಗ್ರಹಾರಕ್ಕೆ ರವಾನಿಸಲಾಗುತ್ತದೆ.
ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಎಂದು ರೇಣುಕಾಸ್ವಾಮಿಯನ್ನು ಶೆಡ್‌ವೊಂದಕ್ಕೆ ಕರೆತಂದು ಹಲ್ಲೆ ನಡೆಸಲಾಗಿತ್ತು. ಗಂಭೀರ ಹಲ್ಲೆಯಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಪ್ರಕರಣ ಮುಚ್ಚಿಹಾಕಲು ಪ್ರಯತ್ನ ನಡೆದಿತ್ತು. ಮೃತದೇಹ ವಿಲೇವಾರಿ ಮಾಡಲು ಮತ್ತು ದರ್ಶನ್ ಹೆಸರು ಬಾಯಿಬಿಡದಿರಲು ಕೆಲವರಿಗೆ ₹ 30 ಲಕ್ಷ ರೂ. ಹಣ ನೀಡಲಾಗಿತ್ತು. ಆ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.